ಬಂಧನ, ಕಿರುಕುಳಗಳಿಂದ ನಮ್ಮನ್ನು ತಡೆಯಲಾಗದು: ಪಾಪ್ಯುಲರ್ ಫ್ರಂಟ್

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ಆಯೋಜಿಸಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯು ನಿರ್ಣಯವೊಂದನ್ನು ಅಂಗೀಕರಿಸಿದ್ದು, ದೇಶದ ವಿವಿಧ ಭಾಗಗಳಲ್ಲಿ ಸಂಘಟನೆಯ ವಿರುದ್ಧ ನಡೆಯುತ್ತಿರುವ ತೇಜೋವಧೆಯ ಅಭಿಯಾನವನ್ನು ತೀವ್ರವಾಗಿ ಖಂಡಿಸಿದೆ.

- Advertisement -


ತೆಲಂಗಾಣ ಮತ್ತು ಬಿಹಾರದಲ್ಲಿ ಸಂಘಟನೆ ಮತ್ತು ಅದರ ಸದಸ್ಯರನ್ನು ಗುರಿಪಡಿಸುತ್ತಾ, ಆ ನಂತರ ಸಂಘಟನೆಯ ವಿರುದ್ಧ ಸುಳ್ಳು ಪ್ರಚಾರಗಳನ್ನು ನಡೆಸಲಾಗುತ್ತಿದೆ. ಇದರ ಹಿಂದೆ ಸಂಘಟನೆಯನ್ನು ಮೌನಗೊಳಿಸುವ ಒಂದು ದೊಡ್ಡ ಪಿತೂರಿ ಇರುವುದು ಬಹಳ ಸ್ಪಷ್ಟವಾಗಿದೆ. ಇವೆರಡು ರಾಜ್ಯಗಳಲ್ಲೂ ಪಾಪ್ಯುಲರ್ ಫ್ರಂಟ್ ಅನ್ನು ಒಂದೇ ಮಾದರಿಯಲ್ಲಿ ಗುರಿಪಡಿಸಲಾಯಿತು. ಅಮಾಯಕ ಮುಸ್ಲಿಮ್ ಯುವಕರನ್ನು ಬಂಧಿಸುವುದು, ಅವರನ್ನು ಜಾಮೀನು ರಹಿತ ಸೆಕ್ಷನ್ ಗಳ ಅಡಿಯಲ್ಲಿ ಕಂಬಿಗಳ ಹಿಂದೆ ತಳ್ಳಲು ಭಯೋತ್ಪಾದನೆಯ ಹೇಳಿಕೆಯನ್ನು ಸಿದ್ಧಪಡಿಸುವುದು ಮತ್ತು ಇದರಲ್ಲಿ ಪಾಪ್ಯುಲರ್ ಫ್ರಂಟ್ ನ ಹೆಸರನ್ನು ಜೋಡಿಸುವ ಕೆಲಸ ನಡೆಯಿತು. ಈ ಒಟ್ಟು ಪ್ರಕ್ರಿಯೆಯಲ್ಲಿ, ಕಾನೂನಿನ ಮೂಲಕ ನಾಗರಿಕರಿಗೆ ಖಾತರಿಪಡಿಸಲಾದ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಗಾಳಿಗೆ ತೂರಲಾಯಿತು. ಯಾವುದೇ ರೀತಿಯ ಅಪರಾಧ ನಡೆಸಿದ ಕಾರಣಕ್ಕಾಗಿ ಈ ಮುಸ್ಲಿಮ್ ಯುವಕರನ್ನು ಗುರಿಪಡಿಸಲಾಗಿಲ್ಲ , ಬದಲಿಗೆ ತಮ್ಮ ಪ್ರಜಾಸತ್ತಾತ್ಮಕ ಹೋರಾಟದ ಸ್ವಾತಂತ್ರ್ಯವನ್ನು ಬಳಸಿದ ಕಾರಣಕ್ಕಾಗಿ ಅವರನ್ನು ಗುರಿಪಡಿಸಲಾಯಿತು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.


ವಾಸ್ತವವನ್ನು ಜನರ ಮುಂದೆ ತೆರೆದಿಡುವ ಬದಲಿಗೆ ಪ್ರಕರಣವನ್ನು ಆತುರದಲ್ಲಿ ಮತ್ತಷ್ಟು ಭಾವನಾತ್ಮಕಗೊಳಿಸುವ ಮೂಲಕ ಪೊಲೀಸರ ದುರುದ್ದೇಶದ ಕಾರ್ಯಾಚರಣೆಯನ್ನು ಮಾಧ್ಯಮದ ಒಂದು ದೊಡ್ಡ ವರ್ಗದ ಮೂಲಕ ಮತ್ತಷ್ಟು ಸುಗಮಗೊಳಿಸಲಾಗುತ್ತಿದೆ. ಇಂದು ಪಾಪ್ಯುಲರ್ ಫ್ರಂಟ್ ಜೊತೆಗೆ ಆಗಿದ್ದರೆ, ನಾಳೆ ಇದೇ ಧೋರಣೆ ಮತ್ತು ವಿಧಾನಗಳನ್ನು ಸರಕಾರವು ತಾನು ಇಷ್ಟಪಡದ ಹೋರಾಟದೊಂದಿಗೆ ತೋರಲಿದೆ. ಇಂತಹ ಬಂಧನಗಳಿಂದ ಪಾಪ್ಯುಲರ್ ಫ್ರಂಟ್ ಅನ್ನು ತಡೆಯಲಾಗದು. ಆಡಳಿತದ ಈ ಕಿರುಕುಳದ ವಿರುದ್ಧ ಸಂಘಟನೆಯು ತನ್ನ ಪ್ರಜಾಸತ್ತಾತ್ಮಕ ಹೋರಾಟವನ್ನು ಮುಂದುವರಿಸಲಿದೆ. ದೇಶವನ್ನು ಪೊಲೀಸ್ ರಾಜ್ಯವನ್ನಾಗಿ ಮಾರ್ಪಡಿಸುವ ಈ ಪ್ರವೃತ್ತಿಯ ವಿರುದ್ಧ ಧ್ವನಿ ಎತ್ತಬೇಕೆಂದು ಪಾಪ್ಯುಲರ್ ಫ್ರಂಟ್ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜವನ್ನು ಒತ್ತಾಯಿಸುತ್ತದೆ.

- Advertisement -

ಪಾಪ್ಯುಲರ್ ಫ್ರಂಟ್ ನ ಎನ್.ಇ.ಸಿ ಪಾಸು ಮಾಡಿದ ಮತ್ತೊಂದು ನಿರ್ಣಯದಲ್ಲಿ, ಅಸಂವಿಧಾನಿಕ ಪದಗಳ ಹೊಸ ಪಟ್ಟಿಯು ಮುಕ್ತವಾಗಿ ಮಾತನಾಡುವುದನ್ನು ನಿಷೇಧಿಸುವುದಕ್ಕೆ ಸಮನಾಗಿದೆ ಎಂದು ಹೇಳಿದೆ.


ಸಂಸದರು ಆಡಳಿತ ವರ್ಗಕ್ಕೆ ಪ್ರಶ್ನೆಗಳನ್ನು ಕೇಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿರುವ ಸದನದ ಉದ್ದೇಶವಾಗಿರುತ್ತದೆ. ಆದರೆ ಅಲ್ಲಿ ಪದಗಳ ಮೇಲೆ ನಿರ್ಬಂಧ ಹೇರಿ ಈ ಸರಕಾರವು ಸಂಸದರ ಮಾತನಾಡುವ ಸಾಮರ್ಥ್ಯವನ್ನು ಅಂತ್ಯಗೊಳಿಸಲು ಬಯಸುತ್ತಿದೆ. ಇದು ತಮ್ಮ ಧ್ವನಿಯಾಗುವ ನಿಟ್ಟಿನಲ್ಲಿ ಜನರು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿದ ಸಂಸದರಿಗೆ ಅವಮಾನವಾಗಿದೆ. ಇದು ಚರ್ಚೆಯ ಮೇಲೆ ನಿಯಂತ್ರಣ ಸಾಧಿಸುವ ಮತ್ತು ಕತ್ತರಿ ಪ್ರಯೋಗ ನಡೆಸುವ ಪ್ರಯತ್ನವಾಗಿದ್ದು, ಇದನ್ನು ಬಹಿರಂಗಪಡಿಸಬೇಕಾಗಿದೆ ಮತ್ತು ತಿರಸ್ಕರಿಸಬೇಕಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಿಳಿಸಿದೆ.



Join Whatsapp