ಬೆಂಗಳೂರು: ನಮ್ಮದು ಗಾಂಧೀಯ ಹಿಂದುತ್ವ, ಬಿಜೆಪಿ ಗೋಡ್ಸೆ ಹಿಂದುತ್ವವನ್ನು ಪ್ರತಿಪಾದಿಸುತ್ತಿದೆ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ರೈತರ ಸಾಗುವಲಿ ಭೂಮಿಯನ್ನು ಬಲವಂತವಾಗಿ ವಶಪಡಿಸುವ ಅರಣ್ಯ ಇಲಾಖೆ ಮತ್ತು ಸರ್ಕಾರದ ಷಡ್ಯಂತ್ರ್ಯದ ವಿರುದ್ಧ ಮಧುಗಿರಿಯ ಬಂದ್ರೇಹಳ್ಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.
ಪ್ರತಿಭಟನಾ ವೇಳೆ ಸಂಘಪರಿವಾರದ ವಿರುದ್ಧ ಹರಿಹಾಯ್ದ ರಾಜಣ್ಣ, ‘ಹಿಂದುತ್ವ ಹಿಂದುತ್ವ ಎಂದು ಬೊಬ್ಬಿಡುವವರಿಗೆ ನಾನು ಹೇಳ ಬಯಸುವುದೇನೆಂದರೆ, ನಾವೆಲ್ಲರೂ ಹಿಂದೂಗಳೇ, ನಾವೇನೋ ಕ್ರಿಶ್ಚಿಯನ್, ಪಾರ್ಸಿ ಅಥವಾ ಇನ್ನಾವುದೋ ಧರ್ಮದವರಲ್ಲ. ಆದರೆ ಕಾಂಗ್ರೆಸ್ ನವರು ಗಾಂಧೀಜಿಯ ಹಿಂದುತ್ವವನ್ನು ಮತ್ತು ಬಿಜೆಪಿಯವರು ಗೋಡ್ಸೆಯ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ಗೋಡ್ಸೆಯ ಹಿಂದುತ್ವವನ್ನು ನಾವೆಲ್ಲರೂ ವಿರೋಧಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಗೋಡ್ಸೆ ಹಿಂದುತ್ವವನ್ನು ಪ್ರತಿಪಾದಿಸುವವರು ಹಿಂದೂಗಳೆಲ್ಲ ಒಂದೇ ಎಂದು ಪ್ರಚಾರಪಡಿಸುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಪರಿಶಿಷ್ಟ ಜಾತಿಯವರನ್ನಾಗಲಿ, ನಮ್ಮೊಂದಿಗಾಗಲೀ ಸಂಬಂಧ ಬೆಳೆಸಲಿ. ಗೋಡ್ಸೆ ಹಿಂದುತ್ವ ಪ್ರತಿಪಾದಕರು ಕೇವಲ ವೋಟ್’ಗಾಗಿ ದೇಶಭಕ್ತರು ಎಂದು ಪೋಸ್ ಕೊಡುತ್ತಾರೆಯೇ ಹೊರತು ಚೀನಾದ ಬಗ್ಗೆ ಮೌನವಹಿಸಿದ್ದು, 56 ಇಂಚಿನ ಎದೆಗಾರಿಕೆಯ ವ್ಯಕ್ತಿಗಳು ಚೀನಾದ ವಿರುದ್ಧ ತನ್ನ ದೇಶಭಕ್ತಿಯನ್ನು ತೋರಿಸಲು ಮುಂದೆ ಬರಲಿ ಎಂದು ಅವರು ಸವಾಲೆಸೆದಿದ್ದಾರೆ.