ಮಂಗಳೂರು: ಬಜರಂಗದಳ ಮುಖಂಡನಿಂದ ಬೆಳ್ತಂಗಡಿ ನಿವಾಸಿ ದಿನೇಶ್ ಕನ್ಯಾಡಿ ಕೊಲೆಯಾಗಿ ಒಂದು ತಿಂಗಳಾಗುತ್ತಿದ್ದರೂ ರಾಜ್ಯ ಬಿಜೆಪಿ ಸರಕಾರದಿಂದ ಪರಿಹಾರ ದೊರಕದ ಹಿನ್ನೆಲೆ ಮೃತ ದಿನೇಶ್ ಪತ್ನಿ ಕವಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ದಲಿತರೆಂಬ ಕಾರಣಕ್ಕೆ ಸರಕಾರ ಸೂಕ್ತ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಕುಟುಂಬಕ್ಕೆ ಪರಿಹಾರ ಕೊಡಲಾಗಿದೆ, ನಮಗೇಕೆ ತಾರತಮ್ಯ ಎಂದು ಪ್ರಶ್ನಿಸಿದ್ದಾರೆ. ನಾವು ಹಿಂದುಗಳಲ್ಲವೇ, ನಾವು ಕೂಡ ಮನುಷ್ಯರೇ, ದಲಿತರು ಎನ್ನುವ ಕಾರಣಕ್ಕೆ ಸರಿಯಾದ ಪರಿಹಾರ ನೀಡಿಲ್ಲ. ಘೋಷಣೆ ಮಾಡಿದ ಪರಿಹಾರದಲ್ಲಿ ಅರ್ಧದಷ್ಟು ಮಾತ್ರ ಪರಿಹಾರ ನೀಡಿದ್ದಾರೆ ಎಂದು ಕವಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ, ಕೊಲೆಯಾದ ದಿನೇಶ್ ಕನ್ಯಾಡಿಗೆ ಪರಿಹಾರ ಒದಗಿಸುವಂತೆ ಸರಕಾರವನ್ನು ಆಗ್ರಹಿಸಿದ್ದರು. ಶಿವಮೊಗ್ಗದ ಹರ್ಷ ನಿಗೆ 25 ಲಕ್ಷ ರೂ. ಪರಿಹಾರ ನೀಡಿದ ಸರಕಾರ, ದಿನೇಶ್ ಕುಟುಂಬಕ್ಕೆ ಪರಿಹಾರ ಕೊಟ್ಟಿದೆಯಾ, ಕೊಡುವ ದುಡ್ಡು ಇವರಪ್ಪನದ್ದೇನಲ್ಲಾ, ಸಾರ್ವಜನಿಕರ ತೆರಿಗೆಯ ದುಡ್ಡು ಎಂದು ವಾಗ್ದಾಳಿ ನಡೆಸಿದ್ದರು.