ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯಲು ನಾವು ರಾಷ್ಟ್ರ ಮತ್ತು ಸಂವಿಧಾನಕ್ಕೆ ಬದ್ಧರಾಗಿದ್ದೇವೆ: ಅನೀಸ್ ಅಹ್ಮದ್

Prasthutha|

ಪಾಪುಲರ್ ಫ್ರಂಟ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತ ಅನೀಸ್ ಅಹ್ಮದ್  ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ  ‘ಡೆಕ್ಕನ್ ಕ್ರೋನಿಕಲ್’ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

- Advertisement -

ಅನೀಸ್ ಅಹ್ಮದ್  ಭಾರತದ ಬಡವರು, ಕಟ್ಟಕಡೆಯ ಜನರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳವರ ಹಕ್ಕುಗಳ ರಕ್ಷಣೆಗಾಗಿ ಸದಾ ಹೋರಾಡುತ್ತಿದ್ದಾರೆ. ಸಮಾಜ ಕಾರ್ಯ ಚಟುವಟಿಕೆ, ವಿವಾದಗಳು, ಮುಂದೆ ಇಡಬೇಕಾದ ಹೋರಾಟದ ಹೆಜ್ಜೆಗಳು ಈ ಬಗ್ಗೆ ಏಳುವ ಪ್ರಶ್ನೆಗಳಿಗೆಲ್ಲ ಅನೀಸ್ ಅಹ್ಮದ್ ಸಮರ್ಥವಾಗಿ ಉತ್ತರಿಸಬಲ್ಲರು.

ಪಾಪ್ಯುಲರ್ ಫ್ರಂಟ್ ಇತ್ತೀಚೆಗೆ ಒಳ್ಳೆಯ ಕೆಲಸಕ್ಕಾಗಿ ಸುದ್ದಿಯಲ್ಲಿದೆ. ಪ್ರವಾಹದ ಕಾಲದಲ್ಲಿ, ಕೋವಿಡ್ ಕಾಲದಲ್ಲಿ ಮೃತಪಟ್ಟವರ ಶವಗಳನ್ನು ಅವರ ಧರ್ಮಾಚರಣೆಯಂತೆ ಅಂತ್ಯಸಂಸ್ಕಾರ ನೆರವೇರಿಸಿದ ಶ್ರೇಯಸ್ಸು ಅವರ ಸಂಘಟನೆಯದ್ದಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿಯಾದಾಗ ಅವರು ಸ್ಪಷ್ಟವಾಗಿ ಅದನ್ನು ಖಂಡಿಸಿದ್ದರು.

- Advertisement -

1 ನಿಮ್ಮ ಸಂಘಟನೆಯ ನಿಜವಾದ ಗುರಿಗಳೇನು, ಬಲವೇನು?

ನಮ್ಮದು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಅಲ್ಪಸಂಖ್ಯಾತರ ಸಂಘಟನೆಯಾಗಿದ್ದು, ಭಾರತದ ಎಲ್ಲ ಮುಖ್ಯ ರಾಜ್ಯಗಳಲ್ಲಿಯೂ ಇದು ತನ್ನ ನೆಲೆ ಕಂಡುಕೊಂಡಿದೆ. ಅಲ್ಪಸಂಖ್ಯಾತರ ಸಂಘಟನೆ ಎಂದ ಕೂಡಲೆ ನಾವು ಒಂದು ವರ್ಗಕ್ಕಾಗಿ ಕೆಲಸ ಮಾಡುವವರು ಎಂದು ತಿಳಿಯಬೇಕಾಗಿಲ್ಲ. ನಾವು ಎಲ್ಲರ ಏಳಿಗೆಗಾಗಿ ಕೆಲಸ ಮಾಡುತ್ತೇವೆ ಮತ್ತು ಮುಖ್ಯವಾಗಿ ಸಮಾಜದ ಕಟ್ಟ ಕಡೆಯ ಜನರ ಮುನ್ನಡೆಗಾಗಿ ದುಡಿಯುತ್ತೇವೆ. ಎಲ್ಲಾದರೂ ಬಡತನ ಇದ್ದರೆ ಅದು ಎಲ್ಲೆಡೆಯ ಸಮೃದ್ಧಿಗೆ ಕಂಟಕ ಹಾಗೂ ಎಲ್ಲಾದರೂ ತಾರತಮ್ಯ ಇದ್ದರೆ ಅದು ಎಲ್ಲೆಡೆಯ ವೈವಿಧ್ಯತೆಗೆ ಕಂಟಕ ಎಂದು ನಂಬಿ ಕೆಲಸ ಮಾಡುವವರು ನಾವು. ಅಂದಿನಿಂದಲೂ ಆ ಹಾದಿ ಬಿಟ್ಟಿಲ್ಲ. ಪಿಎಫ್ ಐ ದೇಶದ ಬಹುತೇಕ ರಾಜ್ಯ ಮತ್ತು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ನಾವು ತಳ ಮಟ್ಟದಿಂದ ಕೆಲಸ ಮಾಡುತ್ತೇವೆ. ಹಳ್ಳಿ ಮತ್ತು ಪಟ್ಟಣಗಳಲ್ಲಿ ಸಾಮಾಜಿಕ ಕೆಲಸವನ್ನು ಒಂದು ಜಾಲಬಂಧದಲ್ಲಿ ಮಾಡಲು ನಾವು ಕಾರ್ಯಕರ್ತರನ್ನು ತಯಾರು ಮಾಡುತ್ತಿದ್ದೇವೆ. ಅವರೇ ನಮ್ಮ ಶಕ್ತಿ. ಒಂದು ಜನ ಸಮೂಹದ ಚಳವಳಿಯಾಗಿದೆ ಪಿಎಫ್ ಐ. ನಾವು ಜನರೊಂದಿಗೆ ಇದ್ದೇವೆ ಮತ್ತು ನಮ್ಮೊಂದಿಗೆ ಜನರು ಇದ್ದಾರೆ.

2 ಈಗ ನಾವು ನಿಮ್ಮ ಸಂಘಟನೆಯ ಮೇಲೆ ಬಂದಿರುವ ಒಂದು ಆರೋಪವನ್ನು ನೋಡೋಣ. ಕೇರಳದಲ್ಲಿ ನಿಮ್ಮ ಸಂಘಟನೆಯವರು ಪ್ರೊಫೆಸರ್ ಜೋಸೆಫ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ. ಇದು ಯೋಜಿತ ದಾಳಿಯೇ, ಪಿಎಫ್ ಐ ಇದನ್ನು ನಡೆಸಿತೇ?

ಇದು ಹತ್ತು ವರ್ಷಗಳ ಹಿಂದಿನ ಒಂದು ಸ್ಥಳೀಯ ಘಟನೆಯಾಗಿದ್ದು, ನಮ್ಮ ಸಂಘಟನೆಗೂ ಅದಕ್ಕೂ ನೇರ ಸಂಬಂಧಿಸಿಲ್ಲ. ಕೇರಳದ ತೋಡುಪುಳದ ನ್ಯೂ ಮೆನ್ಸ್ ಕಾಲೇಜಿನಲ್ಲಿ ಮಲಯಾಳಂ ಕಲಿಸುವ ಪ್ರೊಫೆಸರ್ ಜೋಸೆಫ್ ಅವರು ಪ್ರವಾದಿ ಮುಹಮ್ಮದ್ ಮತ್ತು ಧರ್ಮದ ಬಗ್ಗೆ ತೀರಾ ಕೆಟ್ಟ ರೀತಿಯ ಪ್ರಶ್ನೆ ಪತ್ರಿಕೆಯೊಂದನ್ನು ಯುಜಿ ವಿದ್ಯಾರ್ಥಿಗಳಿಗಾಗಿ ತಯಾರಿಸಿದ್ದರು. ಈ ಧರ್ಮ ನಿಂದನೆಯ ಪ್ರಶ್ನೆ ಪತ್ರಿಕೆಯ ಭಾಗವನ್ನು ಹಿಂಪಡೆಯುವಂತೆ ಅವರಿಗೆ ಹಲವು ವಿದ್ಯಾರ್ಥಿಗಳು ಮತ್ತು ಉಪಾಧ್ಯಾಯರು ಮನವಿ ಮಾಡಿದರು. ಆದರೆ ಪ್ರೊ. ಜೋಸೆಫ್ ಅದನ್ನು ಕಿವಿಯ ಮೇಲೆ ಹಾಕಿಕೊಂಡಿಲ್ಲ. ಇದು ಸ್ಥಳೀಯ ಮುಸ್ಲಿಮರನ್ನು ಕೆರಳಿಸಿದ್ದರಿಂದ ಒಂದು ದಿನ ಅವರ ಮೇಲೆ ದಾಳಿಯಾಗಿದೆ. ಇದು ಸ್ಥಳೀಯರು ಕೆರಳಿ ಮಾಡಿದ ಒಂದು ಘಟನೆಯಾಗಿದ್ದು, ಈ ಸುದ್ದಿ ಬಂದಾಗಲೇ ಅದನ್ನು ನಮ್ಮ ಸಂಘಟನೆಯು ಖಂಡಿಸಿತ್ತು.

ನವದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಸಂಘಟನೆಯ ಅಧ್ಯಕ್ಷರು ನಮ್ಮ ಸಂಘಟನೆಯು ಅಂಥ ಹಿಂಸಾತ್ಮಕ ದಾಳಿಗಳ ಬಗ್ಗೆ ನಂಬಿಕೆ ಹೊಂದಿಲ್ಲ ಎಂದು ಆಗಲೇ ಸ್ಪಷ್ಟವಾಗಿ ನಿರಾಕರಿಸಿದ್ದರು. ಪ್ರೊಫೆಸರ್ ಮೇಲೆ ದಾಳಿ ಮಾಡಿದ ಎಲ್ಲರನ್ನು ಬಂಧಿಸಲಾಗಿತ್ತು ಮತ್ತು ಅವರಲ್ಲಿ ಕೆಲವರಿಗೆ ಶಿಕ್ಷೆಯೂ ಆಗಿದೆ. ಇದರಲ್ಲಿ ನಮ್ಮ ಸಂಘಟನೆಗೆ ಸಂಬಂಧವಿದೆ ಎಂದು ನಿರೂಪಿಸುವಲ್ಲಿ ಪ್ರಾಸಿಕ್ಯೂಶನ್ ಪೂರ್ಣ ವಿಫಲವಾಗಿತ್ತು. ನಾವು ಆ ಕೇಸಿನಲ್ಲಿ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೆವು ಮತ್ತು ಈ ಹಲ್ಲೆಯ ಘಟನೆಯಲ್ಲಿ ಪಾಪುಲರ್ ಫ್ರಂಟ್ ಯಾವ ಪಾತ್ರವನ್ನೂ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದೆವು. ಆದರೆ ನಮ್ಮ ಹೆಸರನ್ನು ಕೆಡಿಸಲು, ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರಲು ಕೆಲವರು ಈಗಲೂ ನಮ್ಮ ಸಂಘಟನೆಯ ಹೆಸರನ್ನು ಆ ಘಟನೆಗೆ ತಳುಕು ಹಾಕುತ್ತಿದ್ದಾರೆ.

3 ನೀವು ಮರು ಒಟ್ಟುಗೂಡಿದ ಸಿಮಿ (ಎಸ್ ಐಎಂಐ) ಸಂಘಟನೆಯವರು ಎಂದು ಕೂಡ ವರದಿ ಇದೆ. ನಿಮ್ಮ ಸಂಘಟನೆಯ ನಾಯಕರು ಸಿಮಿ ಹಿನ್ನೆಲೆಯವರು ಇರುವುದರಿಂದ ನೀವು ಇದನ್ನು ಹೇಗೆ ಅಲ್ಲಗಳೆಯುತ್ತೀರಿ? 

ಕೆಲವು ವಿರೋಧಿಗಳು, ಪಟ್ಟಭದ್ರರು ನಮ್ಮ ಸಂಘಟನೆಯ ವಿರುದ್ಧ ತಳಬುಡವಿಲ್ಲದ ಆರೋಪ ಮಾಡುತ್ತ ಜನರನ್ನು ತಪ್ಪು ದಾರಿಗೆ ಎಳೆಯುತ್ತಲಿದ್ದಾರೆ. ನಮ್ಮನ್ನು ನಿಷೇಧಿಸಲ್ಪಟ್ಟ ಸಂಘಟನೆಗಳ ಜೊತೆಗೆ, ವಿದೇಶೀ ಸಂಘಟನೆಗಳ ಜೊತೆಗೆ ಇತ್ಯಾದಿ ಎಂದು ಸೇರಿಸಿ ಹೇಳುತ್ತಿರುತ್ತಾರೆ, ಮತ್ತೆ ಮತ್ತೆ ಆಪಾದಿಸುತ್ತಲೇ ಇರುತ್ತಾರೆ. ನಮ್ಮ ಸಂಘಟನೆಯು ಇಂಥ ಆರೋಪಗಳ ವಿರುದ್ಧ ಅಗತ್ಯ ಬಿದ್ದಾಗಲೆಲ್ಲ ನಿಷ್ಪಕ್ಷಪಾತವಾದ ತನಿಖೆ ನಡೆಸಲು ಮತ್ತು ತಪ್ಪು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ. ಅವರು ತನಿಖೆ ನಡೆಸಿ ಆಧಾರಪೂರ್ವಕವಾಗಿ ಹೇಳಲಿ. ಪಾಪುಲರ್ ಫ್ರಂಟ್ ಖಂಡಿತ ಸಿಮಿಯ ಮರು ಒಗ್ಗೂಡುವಿಕೆ ಅಲ್ಲ. ಈ ಆರೋಪವು ಎಷ್ಟು ಅಬದ್ಧ ಮತ್ತು ಸುಳ್ಳು ಎಂದರೆ ಸಿಮಿ ನಿಷೇಧಿಸಲ್ಪಟ್ಟಿದ್ದು 2001ರಲ್ಲಿ, ಆದರೆ ಪಾಪುಲರ್ ಫ್ರಂಟ್ 1993ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಸಿಮಿ ಮತ್ತು ಎನ್ ಡಿಎಫ್ ಗಳು ಎರಡು ವಿಭಿನ್ನ ಸಿದ್ಧಾಂತಗಳ, ವಿಭಿನ್ನ ನಡೆಯ, ವಿಭಿನ್ನ ಸಂಘಟನೆಗಳಾಗಿದ್ದು, ದಶಕಗಳ ಕಾಲ 2001ರಲ್ಲಿ ಸಿಮಿ ನಿಷೇಧಗೊಳ್ಳುವವರೆಗೆ ಅಕ್ಕಪಕ್ಕದಲ್ಲಿ ತಂತಮ್ಮ ಕೆಲಸ ಮಾಡಿವೆ. ನಮ್ಮದು ಒಂದು ಸ್ವತಂತ್ರ ಪ್ರಜಾಸತ್ತಾತ್ಮಕ ದೇಶೀಯ ಸಂಘಟನೆಯಾಗಿದ್ದು, ಯಾವುದೇ ವಿದೇಶೀ ಪ್ರಭಾವ ಇಲ್ಲವೇ ಹೊರ ಸಂಬಂಧವನ್ನು ಹೊಂದಿಲ್ಲ.

4 ನೀವು ಯಾವುದಾದರೂ ಸಮುದಾಯ ಇಲ್ಲವೇ ಗುಂಪಿನ ವಿರೋಧಿಯೆ?

ನಾವು ಮುಸ್ಲಿಮರ ಜೊತೆಗಿರುವಂತೆಯೇ ಹಿಂದೂಗಳ ಜೊತೆಗೂ ಇದ್ದೇವೆ. ನಾವು ಎಲ್ಲ ಧರ್ಮೀಯರು ಸಮುದಾಯದವರು ಶಾಂತಿಯುತವಾಗಿ ಒಟ್ಟಾಗಿ ಬದುಕುವುದನ್ನು ಬಯಸುವವರು. ನಾವು ಹಿಂದೂ ಮತ್ತು ಹಿಂದುತ್ವ ವಿಭಿನ್ನವಾದುದು ಎಂಬುದನ್ನು ಬಲ್ಲೆವು. ಸಂಘ ಪರಿವಾರವು ಹಿಂದೂಗಳ, ಹಿಂದೂ ಧರ್ಮದ ಪ್ರಾತಿನಿಧಿಕ ಸಂಸ್ಥೆ ಎಂಬುದನ್ನು ನಾವು ಒಪ್ಪಲಾರೆವು. ನಾವು ಮೂರು ದಶಕಗಳಿಂದಲೂ ಜನರಿಗೆ ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ ಎಂಬುದನ್ನು ಎತ್ತಿ ಹೇಳುತ್ತಲೇ ಇದ್ದೇವೆ.

ಹಿಂದೂ ಧರ್ಮವು ಒಂದು ಧಾರ್ಮಿಕ ನಂಬಿಕೆಯಾಗಿದೆ. ಹಿಂದುತ್ವ ಎನ್ನುವುದು ಇತರರನ್ನು ದ್ವೇಷಿಸುವ ಒಂದು ರಾಜಕೀಯ ಸಿದ್ಧಾಂತವಾಗಿದೆ. ಆರೆಸ್ಸೆಸ್ಸನ್ನು ವಿರೋಧಿಸುವುದೆಂದರೆ ಅದು ಹಿಂದೂಗಳನ್ನು ವಿರೋಧಿಸುವುದಲ್ಲ ನಿಜವಾಗಿ ಹೇಳುವುದೆಂದರೆ ಅವರನ್ನು ಬೆಂಬಲಿಸುವುದಾಗಿದೆ. ಆರೆಸ್ಸೆಸ್ ಮತ್ತು ಬಿಜೆಪಿಯವರು ಹಿಂದೂ ಧರ್ಮವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕರಾದ ಹಿಂದೂಗಳ ಮೇಲೆ ದಾಳಿ ಆದಾಗ ನಾವು ಅದನ್ನು ಅನೈತಿಕ ಎಂಬ ಕಾರಣಕ್ಕಾಗಿ ಖಂಡಿಸಿದೆವು. ಅದೇ ರೀತಿ ಇಲ್ಲಿ ನಮ್ಮ ಸಮುದಾಯದವರ ಮೇಲೆ ದಾಳಿ ನಡೆಯುತ್ತಿದ್ದರೂ ತುಂಬ ಜನರು ಮೌನವಾಗಿಯೇ ಇದ್ದಾರೆ. 



Join Whatsapp