►ಮಂಗಳೂರಿನಲ್ಲಿ “ಗರ್ಲ್ಸ್ ಕಾನ್ಫರೆನ್ಸ್”ಉದ್ಘಾಟಿಸಿದ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ
ಮಂಗಳೂರು: ಹಕ್ಕು ಮತ್ತು ನ್ಯಾಯ ನಿರಾಕರಿಸಲ್ಪಡುವ ಮತ್ತು ಮಾನವೀಯತೆಯ ವಿರುದ್ಧವಾಗಿದ್ದು, ಹಿಂದುತ್ವದ ಆಧಾರದಲ್ಲಿ ದೇಶ ನಿರ್ಮಿಸಲು ಹೊರಟ ಆರೆಸ್ಸೆಸ್ ಭಾರತದ ವೈವಿಧ್ಯತೆ ಮತ್ತು ಬಹುತ್ವವನ್ನು ನಾಶಪಡಿಸಿ ಏಕ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುತ್ತಿದೆ. ಕ್ಯಾಂಪಸ್ ನಿರಂತರ ಹೋರಾಟ ನಡೆಸಿ ಆ ಪ್ರಯತ್ನವನ್ನು ವಿಫಲಗೊಳಿಸಲಿದೆ. ಈ ಹೋರಾಟದಲ್ಲಿ ನಮಗೆ ಖಂಡಿತಾ ಜಯ ಸಿಗಲಿದೆ ಎಂದು ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ಎಂ.ಎಸ್. ಸಾಜಿದ್ ಹೇಳಿದ್ದಾರೆ.
“ ಆಯ್ಕೆಯ ಸ್ವಾತಂತ್ರ್ಯವನ್ನು ಖಾತರಿಪಡಿಸೋಣ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯೋಣ’ ಎಂಬ ಘೋಷವಾಕ್ಯದಡಿ ಮಂಗಳೂರಿನ ಪುರಭವನದಲ್ಲಿ ಕ್ಯಾಂಪಸ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಬೃಹತ್ “ಗರ್ಲ್ಸ್ ಕಾನ್ಫರೆನ್ಸ್” ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಘಾಟನೆ ಮಾಡಿದ ಕ್ಯಾಂಪಸ್ ಫ್ರಂಟ್ ರಾಷ್ಟ್ರಾಧ್ಯಕ್ಷ ಎಂ. ಎಸ್. ಸಾಜಿದ್ ಮಾತನಾಡಿ, ಹಿಂದುತ್ವ ಮತ್ತು ಹಿಂದೂ ಧರ್ಮ ಬೇರೆ ಬೇರೆ. ಹಿಂದುತ್ವ ಎಂಬುದು ರಾಜಕೀಯ ಉದ್ದೇಶದಿಂದ ರೂಪಿಸಿರುವ ಸಿದ್ಧಾಂತವಾಗಿದೆ. ಹಿಂದುತ್ವ ಮಾನವೀಯತೆಯ ವಿರುದ್ಧ ಮಾತ್ರವಲ್ಲ, ದೇಶದ ಹಿತಾಸಕ್ತಿಯ ವಿರುದ್ಧವಾಗಿದೆ. ಹಿಂದುತ್ವ ಮೇಲು-ಕೀಳನ್ನು ಪ್ರತಿಪಾದಿಸುವ ಸಿದ್ಧಾಂತವಾಗಿದ್ದು, ಇದರಡಿ ನ್ಯಾಯಾಂಗ ಸೇರಿದಂತೆ ಪ್ರಜಾಪ್ರಭುತ್ವದ ಅಂಗಗಳು ನಾಶವಾಗಲಿದೆ. ಇಲ್ಲಿ ಬಡವರಿಗೆ ಯಾವುದೇ ಗೌರವ ಇರುವುದಿಲ್ಲ. ಆದ್ದರಿಂದ ಈ ಸಿದ್ಧಾಂತವನ್ನು ನಾವು ಖಡಾಖಂಡಿತ ವಿರೋಧಿಸುತ್ತೇವೆ ಎಂದರು.
ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಯೊಂದಿಗೆ ನಾವಿದ್ದೇವೆ. ನಾವು ಇದಕ್ಕೆಲ್ಲ ಹೆದರಬಾರದು. ಸುಧಾ ಭಾರದ್ವಾಜ್, ತೀಸ್ತಾ ಸೆಟಲ್ವಾಡ್ ಇವರೆಲ್ಲರೂ ಕೂಡ ಸತ್ಯದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಜೈಲಿನಲ್ಲಿದ್ದಾರೆ ಎಂದು ಹೇಳಿದ ಅವರು, “ಒಂದು ಕೈಯಲ್ಲಿ ಶಿಕ್ಷಣ ಇನ್ನೊಂದು ಕೈಯಲ್ಲಿ ಹೋರಾಟ” ಎಂಬುದು ನಮ್ಮ ಧ್ಯೇಯವಾಕ್ಯವಾಗಿದೆ. ಎಂದರು.
ಹಿಟ್ಲರ್ ನಂತಹ ಸರ್ವಾಧಿಕಾರಿಗಳು ಇತಿಹಾಸದಲ್ಲಿ ಹೇಗೆ ನಾಶವಾದರು ಎಂಬುದನ್ನು ನಾವು ನೋಡಿದ್ದೇವೆ. ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ ಪರಿಸ್ಥಿತಿ ಇದನ್ನು ಮತ್ತೊಮ್ಮೆ ನೆನಪಿಸಿದೆ. ಇದರಲ್ಲಿ ನಮಗೆ ಪಾಠವಿದೆ ಎಂದು ಸಾಜಿದ್ ಹೇಳಿದರು.
ಪಠ್ಯಪುಸ್ತಕಗಳಿಂದ ಮುಸ್ಲಿಮರು ಮತ್ತು ಸೌಹಾರ್ದ ಪರಂಪರೆಯನ್ನು ತೆಗೆದುಹಾಕಲು ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಮುಂದಾಗಿದೆ. ಆದರೆ ನಮ್ಮ ಇತಿಹಾಸ ನಮ್ಮ ಹೃದಯದಲ್ಲಿದೆ. ಭಾರತದ ಮಣ್ಣಿನ ಕಣ ಕಣದಲ್ಲೂ ನಮ್ಮ ಇತಿಹಾಸವಿದೆ. ಇದನ್ನು ಯಾರಿಂದಲೂ ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ ಎಂ. ಎಸ್. ಸಾಜಿದ್, ದಕ್ಷಿಣ ಭಾರತದ ಕ್ಯಾಂಪಸ್ ಗಳಲ್ಲಿ ಕ್ಯಾಂಸಪ್ ಫ್ರಂಟ್ ಚಳವಳಿ ಬೆಳೆಯುತ್ತಿರುವುದಕ್ಕೆ ಆರ್ ಎಸ್ ಎಸ್ ಕಳವಳ ವ್ಯಕ್ತಪಡಿಸಿದೆ. ಖಂಡಿತವಾಗಿಯೂ ನಾವು ನಿಮಗೆ ದುಸ್ವಪ್ನವಾಗಿ ಕಾಡಲಿದ್ದೇವೆ. ದಕ್ಷಿಣ ಭಾರತ ಮಾತ್ರವಲ್ಲ, ಇಡೀ ಭಾರತದ ವಿದ್ಯಾರ್ಥಿಗಳಲ್ಲೂ ಈ ಹೋರಾಟದ ಕಿಚ್ಚನ್ನು ಹಚ್ಚಲಿದ್ದೇವೆ ಎಂದು ಹೇಳಿದರು.
ಕರಾಟೆ ಪ್ರದರ್ಶನ ನೀಡಿದ ಹುಡುಗಿಯರು ಮತ್ತು ಸಾಮಾಜಿಕ ಜಾಗೃತಿಯ ಸ್ಕಿಟ್ ಪ್ರದರ್ಶಿಸಿದ ಹುಡುಗಿಯರಿಗೆ ವಂದನೆ ಸಲ್ಲಿಸಿದ ಅವರು, ಹಿಜಾಬ್ ಕಾರಣಕ್ಕೆ ಪರೀಕ್ಷೆ ಬರೆಯಲಾಗದ ಹುಡುಗಿಯರ ನೋವು ಮರೆಯಲಾಗದು. ದೇಶದೆಲ್ಲೆಡೆ ಸಾಮಾಜಿಕ ಕಾರ್ಯಕರ್ತರು ಈ ಕ್ರೂರ ಆಡಳಿತದಡಿ ಜೈಲಿನಲ್ಲಿ ಇದ್ದಾರೆ. ಆರೆಸ್ಸೆಸ್ ಬಿಜೆಪಿ ಮೂಲಕ ಸಂವಿಧಾನ ಅಮುಕಿ ತಮ್ಮ ನೀತಿಯ ಸರಕಾರ ನಡೆಸುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಗುಜರಾತ್ ನ ಸಾಮಾಜಿಕ ಕಾರ್ಯಕರ್ತೆ ಕುಂಕುಬೆನ್ ರಾಥೋಡ್ ಮಾತನಾಡಿ, ಇಲ್ಲಿ ನೆರೆದಿರುವ ವಿದ್ಯಾರ್ಥಿಗಳು ಬರೇ ನನ್ನ ಮಗಳಂದಿರಲ್ಲ, ಬೆಂಕಿಯ ಕಿಡಿಗಳು. ಈ ಹೋರಾಟ ಎಂದೂ ನಿಲ್ಲಬಾರದು. ನಮ್ಮ ಹಕ್ಕಿಗಾಗಿ ನಾವು ಹೋರಾಡುವಾಗ ಅಡ್ಡ ಹಾದಿಯ ಸರಕಾರಗಳಿಗೆ ಅವಕಾಶ ನೀಡಬಾರದು. ಯಾಕೆ ದಲಿತ, ಮುಸ್ಲಿಂ ಹುಡುಗಿಯರ ಮೇಲೆಯೇ ದೌರ್ಜನ್ಯ ನಡೆಯುತ್ತದೆ?. ಇದರ ವಿರುದ್ಧ ನಾವು ಧ್ವನಿ ಎತ್ತಬೇಕು. ಚುನಾವಣೆ ಸಂದರ್ಭದಲ್ಲಿ ಎಸ್ ಡಿಪಿಐನಂತಹ ರಾಜಕೀಯ ಪಕ್ಷಗಳಿಗೆ ಮತ ನೀಡಿ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತೆ ಡಾ. ರುಕ್ಸಾನಾ ಹಸನ್ ಮಾತನಾಡಿ, ಈಗ ನನಗನಿಸುತ್ತಿದೆ ಪ್ರತಿಯೊಬ್ಬ ಮಹಿಳೆಯ ಹಿಂದೆ ಒಬ್ಬ ಪುರುಷ ಇದ್ದಾನೆ. ನಾವು ಒಂದಡಿ ಹಿಂದೆ ಇಟ್ಟಿರಬಹುದು. ಆದರೆ ಹೆದರಿಲ್ಲ. ನಾನು ಮಹಿಳೆ, ಶಕ್ತಿ ಹಾಗೂ ಆತ್ಮವಿಶ್ವಾಸ ಹೊಂದಿದ್ದೇನೆ. ಹಾಗಾಗಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮನ್ನು ಬೆಂಬಲಿಸದವರು ಇರಬಹುದು. ಆದರೆ ಈ ರುಕ್ಸಾನಾ ಸರಿಯಾದ ದಾರಿಯಲ್ಲಿ ಮುನ್ನಡೆಯಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ಹೇಳಿದರು.
ಪೊಲೀಸ್, ಸರಕಾರ ಇವೆಲ್ಲ ಒಂದು ಪದ್ದತಿ. ಹಿಜಾಬ್ ನಿಂದಾಗಿ ಇವರಿಗಾದ ತೊಂದರೆಯಾದರೂ ಏನು? ನಮಗೆ ನಮ್ಮದೇ ಸ್ವಂತಿಕೆ ಮತ್ತು ಧ್ವನಿ ಇದೆ. ನಾವು ಹಿಜಾಬ್ ಸೈನಿಕರು. ಹೊಸ ನಾಡನ್ನು ಕಟ್ಟದೆ ನಾವು ವಿಶ್ರಮಿಸುವುದಿಲ್ಲ ಎಂದು ಗುಡುಗಿದರು.
ದೆಹಲಿಯ ಜಾಮಿಯಾ ಮಿಲ್ಲಿಯಾದ ಸಿಎಫ್ಐ ಅಧ್ಯಕ್ಷೆ ವಿದ್ಯಾರ್ಥಿನಿ ಫೌಝಿಯಾ ಮಾತನಾಡಿ, ಫ್ಯಾಶಿಸ್ಟ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಪ್ರತಿಯೊಬ್ಬರಿಗೂ ನಾವು ಧನ್ಯವಾದ ಸಲ್ಲಿಸುತ್ತೇನೆ. ಹೋರಾಟಕ್ಕೆ ಇಳಿದಾಗ ಸಮಾಜ ನಮ್ಮೊಂದಿಗೆ ಇರುತ್ತದೆ ಎಂಬುದು ಸಿಎಎ-ಎನ್ಆರ್ ಸಿ ಹೋರಾಟದ ವೇಳೆ ಸಾಬೀತಾಯಿತು. ಹೋರಾಟಗಾರರು ದೃಢವಾಗಿ ನಿಲ್ಲಬೇಕು ಎಂದು ಹೇಳಿದರು.
ವಿದ್ಯಾರ್ಥಿ ನಾಯಕಿ ಅಲಿಯಾ ಅಸ್ಸಾದಿ ಅವರು ಹಿಜಾಬ್ ಕಾರಣದಿಂದ ತಾವು ಅನುಭವಿಸಿದ ನೋವನ್ನು ಹಂಚಿಕೊಂಡರು.
ಇದಕ್ಕೂ ಮೊದಲು ವಿದ್ಯಾರ್ಥಿ ನಾಯಕಿ ಫಾತಿಮಾ ಸ್ವಾಗತ ಭಾಷಣ ಮಾಡಿ, ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿ ಮರುಗದ ಮುಖ್ಯಮಂತ್ರಿಗಳಿಗೆ ಚಾರ್ಲಿ ಚಲನಚಿತ್ರ ನೋಡಿ ಕಣ್ಣೀರು ಬರುತ್ತದೆ. ಪೊಲೀಸರನ್ನು ಛೂ ಬಿಟ್ಟು ನಮ್ಮ ಮೆರವಣಿಗೆ ತಡೆಯುತ್ತೀರಲ್ವಾ.. ನಮ್ಮ ಧ್ವನಿ ಬಗೆಗೆ ನಿಮಗೆ ಅಷ್ಟು ಭಯ ಯಾಕೆ? ಫ್ಯಾಸಿಸ್ಟ್ ಸರಕಾರ ನಮ್ಮನ್ನು ಯಾವ ಬಲ ಪ್ರಯೋಗಿಸಿ ತಡೆದರೂ ನಾವು ಘರ್ಜಿಸುವುದನ್ನು ನಿಲ್ಲಿಸುವುದಿಲ್ಲ ಎಂದು ನುಡಿದರು.
ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನಾಯಕಿಯರಾದ ಗೌಸಿಯಾ, ಆಯಿಶಾ ಮುರ್ಷಿದಾ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಹಿಜಾಬ್ ನಿಷೇಧದಿಂದ ಉಂಟಾದ ಅವಾಂತರ ಕುರಿತ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.