ಮೀನು ಸಾಗಣೆ ಲಾರಿಗಳಿಂದ ರಸ್ತೆಗಳಿಗೆ ತ್ಯಾಜ್ಯ ನೀರು: ಕ್ರಮ ಕೈಗೊಳ್ಳಲು ಪೊಲೀಸರ ಸಿದ್ಧತೆ

Prasthutha|


ಮಂಗಳೂರು: ಮೀನು ಸಾಗಣೆ ಮಾಡುವ ವಾಹನಗಳು ರಸ್ತೆಯುದ್ದಕ್ಕೂ ತ್ಯಾಜ್ಯ ನೀರನ್ನು ಸಿಂಪಡಿಸುತ್ತ ಸಾಗುವ ಕಾರಣಕ್ಕೆ ರಸ್ತೆಗಳು ಜಾರುವುದು ಮತ್ತು ಅನಗತ್ಯ ನೀರು ನಿಲ್ಲುವಿಕೆಗೆ ಕಾರಣವಾಗುತ್ತಿರುವುದರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸರು ಮುಂದಾಗಿದ್ದಾರೆ.

- Advertisement -


ರಸ್ತೆಯುದ್ದಕ್ಕೂ ತ್ಯಾಜ್ಯ ನೀರನ್ನು ಚೆಲ್ಲುತ್ತಾ ಸಾಗುವ ಮೀನು ಸಾಗಣೆ ವಾಹನಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಶನರ್ ಎನ್. ಶಶಿಕುಮಾರ್ ಅವರು ಅಪರಾಧ ಮತ್ತು ಸಂಚಾರ ವಿಭಾಗದ ಉಪ ಆಯುಕ್ತ ಬಿ. ಪಿ. ದಿನೇಶ್ ಕುಮಾರ್ ಅವರಿಗೆ ಆದೇಶ ನೀಡಿದ್ದಾರೆ.


ಈ ವಿಷಯವಾಗಿ ಎನ್. ಶಶಿಕುಮಾರ್ ಅವರು ಮೀನು ಸಾಗಾಣಿಕೆದಾರರ ಸಭೆ ನಡೆಸಿ, ಇನ್ನು ಮುಂದೆಯೂ ನೀವು ಮೀನು ತ್ಯಾಜ್ಯ ನೀರನ್ನು ರಸ್ತೆಗೆ ಚೆಲ್ಲುತ್ತ ಸಾಗಿದರೆ ಕಾನೂನು ಕ್ರಮ ಎದುರಿಸಲು ತಯಾರಾಗಬೇಕು ಎಂದು ಎಚ್ಚರಿಸಿದ್ದಾರೆ.
ಜುಲೈ 15ರ ಮೀನುಗಾರಿಕೆ ರಜಾ ದಿನದ ಹೊರತಾಗಿ ಮೀನು ಸಾಗಣೆ ಪ್ರಕ್ರಿಯೆ ಚುರುಕುಗೊಂಡಿದೆ. ಮಳೆಗಾಲದಲ್ಲಿ ಮೀನು ತ್ಯಾಜ್ಯ ನೀರು ತೊಳೆದು ಹೋಗುತ್ತದೆ. ಉಳಿದ ಕಾಲದಲ್ಲಿ ಅದು ರಸ್ತೆಯ ಮೇಲೆ ನಿಂತು ವಾಹನದ ಟಯರ್ ಜಾರಲು ಕಾರಣವಾಗುತ್ತದೆ. ಎಷ್ಟೋ ಜನ ದ್ವಿಚಕ್ರ ವಾಹನ ಚಾಲಕರು ತಮ್ಮ ವಾಹನದಿಂದ ಬಿದ್ದು ಗಾಯಗೊಂಡಿರುವ ಘಟನೆಯೂ ನಡೆದಿಎ ಎಂದು ಅವರು ತಿಳಿಸಿದರು.

- Advertisement -


ಮಂಗಳೂರು ಮೀನು ಮಾರುಕಟ್ಟೆ ಸಂಪರ್ಕಿಸುವ ರಸ್ತೆಗಳು, ಕೂಳೂರು ಫೆರಿ ರಸ್ತೆ, ಮೆರ್ಕೆರಾ ಟ್ರಂಕ್ ರಸ್ತೆ, ಮಂಗಳಾದೇವಿ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳಾದ 66, 169, 75 ಇಲ್ಲೆಲ್ಲ ಸದಾ ಮೀನು ತ್ಯಾಜ್ಯ ನೀರು ವಾಹನಗಳಿಂದ ಚೆಲ್ಲುವ ಸಮಸ್ಯೆ ಇದೆ. ಮುಂಜಾನೆ ಮೀನು ಸಾಗಣೆ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ದಕ್ಕೆಯಲ್ಲಿ ಮುಂಜಾವವೇ ಮೀನು ಹರಾಜು ಆಗುತ್ತಲೇ ಅವು ವಾಹನಗಳಿಗೆ ತುಂಬಲ್ಪಟ್ಟು ಬೇರೆ ಬೇರೆ ಸ್ಥಳಗಳಿಗೆ ಹೊರಡುತ್ತವೆ.


ಪ್ರತಿ ವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಬಗ್ಗೆ ದೂರು ತಪ್ಪಿದ್ದಲ್ಲ. ಹಿಂದಿನ ಪೊಲೀಸ್ ಕಮಿಶನರ್ ಕ್ರಮ ತೆಗೆದುಕೊಳ್ಳಲು ಆರಂಭಿಸಿದ್ದರಾದರೂ ಅದು ಸಮಗ್ರವಾಗಲಿಲ್ಲ. 2018ರ ಡಿಸೆಂಬರ್ ಸಭೆಯಲ್ಲಿ ಮೀನು ಸಾಗಣೆ ವಾಹನಗಳನ್ನು ಪೊಲೀಸರು ಸಂಚರಿಸಲು ಬಿಡುವುದಿಲ್ಲ ಎಂದು ಕೂಡ ಆಯುಕ್ತರು ಹೇಳಿದ್ದುಂಟು. ಎಲ್ಲ ವಾಹನಗಳು ಸೋರು ನೀರು ಸಂಗ್ರಾಹಕ ಟ್ಯಾಂಕ್ ಅಳವಡಿಸಿಕೊಳ್ಳಬೇಕು. ನಿಯಮ ಮೀರಿ ತ್ಯಾಜ್ಯ ನೀರು ಚೆಲ್ಲುತ್ತಿದ್ದರೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದೂ ಅವರು ಹೇಳಿದ್ದರು.


ಇನ್ನು ಫಿಶ್ ಮೀಲ್ ಕಾರ್ಖಾನೆಗಳಿಗೆ ಕೊಳೆಯುತ್ತಿರುವ ಮೀನು ಸಾಗಿಸುವ ವಾಹನಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲವೂ 2019ರಲ್ಲಿ ಜಾರಿಗೆ ಬರಲೇ ಇಲ್ಲ, ಅನಂತರ ಕೋವಿಡ್ ಸಮಸ್ಯೆಯಿಂದ ಅದು ಮರೆತೇ ಹೋಗಿದೆ.

Join Whatsapp