ನವದೆಹಲಿ: ಫೋನ್ ಹ್ಯಾಕ್ ಮಾಡಲು ಪ್ರಯತ್ನಿಸುತ್ತಿರುವ ಕುರಿತು ವಿರೋಧ ಪಕ್ಷಗಳ ನಾಯಕರಿಗೆ ಆಪಲ್ ಕಂಪೆನಿಯಿಂದ ಎಚ್ಚರಿಕೆ ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಗಣಕಯಂತ್ರ ತುರ್ತು ಸ್ಪಂದನಾ ತಂಡವು ತನಿಖೆ ಆರಂಭಿಸಿದ್ದು, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆಪಲ್ ಕಂಪನಿಗೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ತಲುಪಿದ ಬಗ್ಗೆ ಆಪಲ್ ಕಂಪನಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ನೋಟಿಸ್ ತಲುಪಿರುವುದನ್ನು ಆಪಲ್ ಕಂಪನಿಯು ಖಚಿತಪಡಿಸಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ X ಖಾತೆಯಲ್ಲಿ, ತನ್ನ ಮೊಬೈಲ್‌ಗಳು ಅತ್ಯಂತ ಸುರಕ್ಷಿತ ಎಂದು ಆಪಲ್ ಕಂಪನಿ ಹೇಳುತ್ತದೆ. ಹಾಗಿದ್ದ ಮೇಲೆ ‘ಎಚ್ಚರಿಕೆ ಸೂಚನೆ’ಗಳನ್ನು ಯಾಕಾಗಿ ಕಳುಹಿಸುತ್ತದೆ. ಈ ಬಗ್ಗೆ ಕಂಪನಿಯು ಸ್ಪಷ್ಟನೆ ನೀಡಬೇಕು ಎಂದು ಬರೆದುಕೊಂಡಿದ್ದರು. ಸಚಿವರ ಈ ಅಭಿಪ್ರಾಯದಲ್ಲಿ ಇದ್ದ ಅಂಶಗಳನ್ನೇ ಇಟ್ಟುಕೊಂಡು ಆಪಲ್ ಕಂಪನಿ ಎಚ್ಚರಿಕೆ ಸೂಚನೆಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿದೆ