ವಾಂಖೆಡೆ ಟೆಸ್ಟ್: ಮಯಾಂಕ್ ಮನಮೋಹಕ ಶತಕ, ಟೀಮ್ ಇಂಡಿಯಾ 221/4

Prasthutha|

ಮುಂಬೈ: ಕನ್ನಡಿಗ ಮಯಂಕ್ ಅಗರವಾಲ್ ದಾಖಲಿಸಿದ ಮನಮೋಹಕ ಶತಕದ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ, 4 ವಿಕೆಟ್ ನಷ್ಟದಲ್ಲಿ 221 ರನ್ ಗಳಿಸಿದೆ.

- Advertisement -

ಮುಂಬೈನ ವಾಂಖೆಡೆ ಮೈದಾನದಲ್ಲಿ ಗುರುವಾರ ರಾತ್ರಿ ಮಳೆ ಸುರಿದಿದ್ದ ಕಾರಣ ಎರಡನೇ ಟೆಸ್ಟ್ ಪಂದ್ಯ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಟಾಸ್ ಆಗುವಷ್ಟರಲ್ಲೇ ಸಮಯ 11.33 ಆಗಿತ್ತು. ವಿಶ್ರಾತಿಯ ಬಳಿಕ ತಂಡಕ್ಕೆ ಮರಳಿದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾದ ಮಯಂಕ್ ಅಗರವಾಲ್ ಹಾಗೂ ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 80 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಶೂನ್ಯ ಸುತ್ತಿದ ಪೂಜಾರ, ಕೊಹ್ಲಿ ..!

- Advertisement -

44 ರನ್ ಗಳಿಸಿ ಔಟ್ ಆಡುತ್ತಿದ್ದ ಶುಭಮನ್ ಗಿಲ್, ಎಜಾಝ್ ಪಟೇಲ್ ಬೌಲಿಂಗ್’ನಲ್ಲಿ ಟೇಲರ್’ಗೆ ಕ್ಯಾಚಿತ್ತು ನಿರ್ಗಮಿಸಿದರು. ತನ್ನ ಮುಂದಿನ ಓವರ್’ನಲ್ಲಿ ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿಯನ್ನು ಖಾತೆ ತೆರಯಲು ಬಿಡದ ಎಜಾಝ್ ಪಟೇಲ್, ಟೀಮ್ ಇಂಡಿಯಾವನ್ನು ಸಂಕಷ್ಟಕ್ಕೆ ತಳ್ಳಿದರು. ಪರಿಣಾಮ 30ನೇ ಓವರ್’ನಲ್ಲಿ ಭಾರತ 80 ರನ್’ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಮಯಾಂಕ್ ಮನಮೋಹಕ ಶತಕದಾಟ

ಆರಂಭಿಕನಾಗಿ ಕಣಕ್ಕಿಳಿದು ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಮಯಾಂಕ್ ಅಗರವಾಲ್ ಶತಕದ ಸಂಭ್ರವನ್ನಾಚರಿಸಿದರು. 246 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 120 ರನ್ ಗಳಿಸಿರುವ ಕನ್ನಡಿಗ ಅಗರ್ವಾಲ್ ಹಾಗೂ ಕೀಪರ್ ವೃದ್ಧಿಮಾನ್ ಸಹಾ 25 ರನ್ ಗಳಿಸಿದ್ದು, ಶನಿವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

ಕಳೆದ ಪಂದ್ಯದಲ್ಲಿ ಶತಕ ಗಳಿಸಿ ಮಿಂಚಿದ್ದ ಶ್ರೇಯಸ್ ಅಯ್ಯರ್, 18 ರನ್’ಗಳಿಸುವಷ್ಟರಲ್ಲೇ ಎಜಾಜ್ ಪಟೇಲ್’ಗೆ ವಿಕೆಟ್ ಒಪ್ಪಿಸಿ ಮರಳಿದರು. ಕಿವೀಸ್ ಪರ 73 ರನ್ ನೀಡಿ ನಾಲ್ಕು ವಿಕೆಟ್ ಪಡೆಯುವ ಮೂಲಕ ಎಜಾಜ್ ಪಟೇಲ್ ಯಶಸ್ವಿ ಬೌಲರ್ ಎನಿಸಿದರು.

Join Whatsapp