ರಸ್ತೆ ಅಭಿವೃದ್ಧಿ, ನಿರ್ವಹಣೆ ಹೆಸರಿನಲ್ಲಿ ಕೋಟ್ಯಂತರ ರೂ.ಲೂಟಿ: ರಾಮಲಿಂಗಾ ರೆಡ್ಡಿ

Prasthutha: December 3, 2021

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 12 ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿ ಹೆಸರಿನಲ್ಲಿ ಕೋಟ್ಯಂತರ ರೂ. ಲೂಟಿ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.


ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಕಾಂಗ್ರೆಸ್ ಮೇಯರ್ ಗಳ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರಿಡಾರ್ ರಸ್ತೆ ಕಾಮಗಾರಿಗೆ 335 ಕೋಟಿ ರೂ.ವೆಚ್ಚವಾದರೆ, ರಸ್ತೆ ನಿರ್ವಹಣೆಗೆ ವಾರ್ಷಿಕವಾಗಿ 150 ಕೋಟಿಯಂತೆ ಒಟ್ಟು ಐದು ವರ್ಷಕ್ಕೆ 785.31 ಕೋಟಿ ರೂ. ನಿಗದಿಯಾಗಿದೆ. ಇದರ ಹಿಂದೆ ಲೂಟಿ ಮಾಡುವ ಹುನ್ನಾರ ಇದೆ ಎಂದು ಆರೋಪಿಸಿದರು.


ಯಾರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶ? : ದೇಶದೆಲ್ಲೆಡೆ ನಿರ್ಮಿಸಿರುವ ರಸ್ತೆಗಳಿಗೆ 2 ವರ್ಷಗಳ ದೋಷ ಬಾಧ್ಯತಾ ಅವಧಿ ಕಡ್ಡಾಯವಾಗಿರುತ್ತದೆ. ನಿಯಮಾನುಸಾರ ಈ ನಿರ್ವಹಣೆಯನ್ನು ಗುತ್ತಿಗೆದಾರರು ಮಾಡಬೇಕು. ಹೀಗಿದ್ದರೂ 335 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆಗಳಿಗೆ ಎರಡು ವರ್ಷ 291.35 ಕೋಟಿ ನೀಡಿ ನಿರ್ವಹಣೆ ಮಾಡುವುದರ ಹಿಂದೆ ಯಾರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶ ಇದೆ ಎಂದು ಕಿಡಿಕಾರಿದ್ದಾರೆ.


ಕಾಮಗಾರಿಯನ್ನು ಬಿಬಿಎಂಪಿಯಿಂದ ಕಿತ್ತು ಕೆಆರ್ಡಿಸಿಎಲ್ ಗೆ ನೀಡಿರುವ ಹಿಂದೆ ಅಕ್ರಮ ಇದೆ ಎಂದು ಆರೋಪಿಸಿದೆ. ಬಿಬಿಎಂಪಿ ರಸ್ತೆ ನಿರ್ವಹಣೆಗೆ ಒಂದು ರೂ. ನೀಡದ ರಾಜ್ಯ ಸರ್ಕಾರ, ಕೆಆರ್ ಡಿಸಿಎಲ್ಗೆ ಪ್ರತಿ ವರ್ಷ 150 ಕೋಟಿ ರೂ. ನೀಡಿರುವುದು ಏಕೆ?. ರಸ್ತೆ ಕಾಮಗಾರಿಯನ್ನು ಕೆಆರ್ಡಿಸಿಎಲ್ಗೆ ನೀಡಿರುವುದರ ಹಿಂದೆ ಯಾವ ಶಕ್ತಿ ಇದೆ?. ಈ 335 ಕೋಟಿ ಮೊತ್ತವನ್ನು ರಸ್ತೆ ಗುಂಡಿ ಮುಚ್ಚಲು ಬಳಸಬೇಕು ಎಂದು ರಾಮಲಿಂಗ ರೆಡ್ಡಿ ಒತ್ತಾಯಿಸಿದ್ದಾರೆ. ವಾರ್ಡ್ ವಿಂಗಡಣೆ ಅವೈಜ್ಞಾನಿಕ : ಬಿಬಿಎಂಪಿ ಪ್ರತ್ಯೇಕ ಕಾಯಿದೆ ಅಡಿ ಪಾಲಿಕೆ ವಾರ್ಡ್ಗಳ ಗರಿಷ್ಠ ಮಿತಿಯನ್ನು 243ಕ್ಕೆ ಏರಿಕೆ ಮಾಡಲಾಗಿದೆ. ಈ ಉದ್ದೇಶಕ್ಕಾಗಿ ವಾರ್ಡ್ಗಳ ಪುನರ್ ವಿಂಗಡಣೆ ಆಯೋಗ ರಚಿಸಲಾಗಿದೆ. ಆದರೂ ವಾರ್ಡ್ವಾರು ಪುನರ್ ವಿಂಗಡಣೆಯನ್ನು ಅವೈಜ್ಞಾನಿಕವಾಗಿ ಮತ್ತು ಬಿಜೆಪಿ ಪಕ್ಷದ ಅನುಕೂಲಕ್ಕೆ ತಕ್ಕಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


ಈ ಉದ್ದೇಶಕ್ಕಾಗಿ ಸಂಸತ್ ಮತ್ತು ವಿಧಾನಮಂಡಲದ ಕ್ಷೇತ್ರಗಳ ಪುನರ್ ವಿಂಗಡನೆ ಮಾದರಿಯಲ್ಲಿ ಬಿಬಿಎಂಪಿ ವಾರ್ಡ್ಗಳ ಪುನರ್ ವಿಂಗಡನೆಗಾಗಿ ಎಲ್ಲಾ ಪಕ್ಷಗಳ ಪ್ರತಿನಿಧಿಗಳ ಒಂದು ಸಮಾಲೋಚನೆ ಸಮಿತಿ ರಚಿಸಬೇಕು ಎಂದು ಅವರು ಆಗ್ರಹಿಸಿದರು.


ಬೆಂಗಳೂರು ಬಗ್ಗೆ ಸಿಎಂಗೆ ಗಮನ ಇಲ್ಲ : ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರಿಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಈವರೆಗೆ ಕೇವಲ ಎರಡು ಬಾರಿ ಮಾತ್ರ ನಗರ ಪ್ರದಕ್ಷಿಣೆ ನಡೆಸಿದ್ದಾರೆ. ಅದು ಕೂಡ ಅಲ್ಪಾವಧಿಯಲ್ಲಿ ಪ್ರದಕ್ಷಿಣೆ ನಡೆಸಿ ಮುಗಿಸಿದ್ದಾರೆ. ಸಿಎಂ ಹೆಚ್ಚಿನ ಸಮಯವನ್ನು ಬೆಂಗಳೂರಿಗೆ ನೀಡಬೇಕು. ಇದು ಸಾಧ್ಯವಾಗದಿದ್ದರೆ, ಉಸ್ತುವಾರಿ ಸಚಿವರನ್ನು ನೇಮಕ ಮಾಡಲಿ ಎಂದು ರಾಮಲಿಂಗಾ ರೆಡ್ಡಿ ಒತ್ತಾಯಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!