ನೀರಿಗಾಗಿ ನಡಿಗೆ, ಹಿಂದೆ ಸರಿವ ಪ್ರಶ್ನೆಯೇ ಇಲ್ಲ; ಡಿ.ಕೆ. ಶಿವಕುಮಾರ್

Prasthutha|

ಇದು ಬಿಜೆಪಿ ಲಾಕ್ ಡೌನ್, ಬಿಜೆಪಿ ಕರ್ಫ್ಯೂ ಎಂದ ಕೆಪಿಸಿಸಿ ಅಧ್ಯಕ್ಷ

- Advertisement -

ಬೆಂಗಳೂರು: ಇದು ಕೋವಿಡ್ ಲಾಕ್ ಡೌನ್ ಅಲ್ಲ, ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್ ಡೌನ್. ಇಲ್ಲಿ ಯಾವುದೇ ಟಫ್ ರೂಲ್ ಇಲ್ಲ. ಬಿಜೆಪಿಯವರು ರಾಜಕಾರಣ ಮಾಡಲು ಟಫ್ ಆಗಿದೆ, ಅವರ ರಾಜಕಾರಣ ಟಫ್ ಆಗಿದೆ, ಜನ ಅವರಿಗೆ ಟಫ್ ಆಗಿ ಉತ್ತರ ನೀಡುತ್ತಿದ್ದಾರೆ. ಅದಕ್ಕಾಗಿ ಈ ನಿರ್ಬಂಧ ಹೇರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಸರಕಾರ ಹೇಳುತ್ತಿದೆ. ರಾಜ್ಯದಲ್ಲಿ 6 ಕೋಟಿ ಜನ ಇದ್ದಾರೆ. ಸೋಂಕಿತರ ಸಂಖ್ಯೆ 2 ರಿಂದ 3 ಸಾವಿರಕ್ಕೆ ಏರಿದೆ ಎಂದು ಹೇಳುತ್ತಿದ್ದಾರೆ. ಆ ಸೋಂಕಿತರು ಎಲ್ಲಿದ್ದಾರೆ ಎಂದು ಪಟ್ಟಿ ಕೊಟ್ಟರೆ ನಾವು ಹೋಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಅವರು ಜಾಥಾ, ಪ್ರತಿಭಟನೆ ಮಾಡಬೇಡಿ ಎಂದಿದ್ದಾರೆ. ನಮ್ಮದು ನೀರಿಗಾಗಿ ನಡಿಗೆ. ವಾಕ್ ಫಾರ್ ದಿ ವಾಟರ್. ನಾವು ನೀರಿಗಾಗಿ ನಡೆಯುತ್ತೇವೆ ಅಷ್ಟೇ ಎಂದರು.

- Advertisement -

ಜನರ ಹಿತಕ್ಕಾಗಿ, ಕುಡಿಯುವ ನೀರಿಗೆ, ಜನರ ಭಾವನೆ, ಧ್ವನಿಗಾಗಿ, ರೈತರ ರಕ್ಷಣೆಗಾಗಿ ಬೆಂಗಳೂರಿನ ನಾಗರಿಕರಿಗಾಗಿ ನಾವು ಮನವಿ ಮಾಡುತ್ತಿದ್ದೇವೆ. ನಮ್ಮದು ಹೋರಾಟವಲ್ಲ ಮನವಿ. ಸರ್ಕಾರ ನಿರ್ಬಂಧ ಎಂದು ನೋಟೀಸ್ ಜಾರಿ ಮಾಡಿದ್ದಾರೆ. ನಾವು ಜಾಥಾ, ಧರಣಿ ಮಾಡುವುದಿಲ್ಲ. ನೀರಿಗಾಗಿ ನಡೆಯುತ್ತೇವೆ. ರಸ್ತೆಯಲ್ಲಿ ಯಾರೂ ನಡೆಯಬಾರದಾ? ಇಡೀ ರಾಜ್ಯದಲ್ಲಿ ರಸ್ತೆಯಲ್ಲಿ ಯಾರೂ ಓಡಾಡಬಾರದಾ? ಅದನ್ನು ತಡೆಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ನನಗೆ ಒಂದು ವಿಚಾರದಲ್ಲಿ ಬಹಳ ಸಂಕಟವಾಗುತ್ತಿದೆ. ಈಗಾಗಲೇ ಜನ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕರು ಒದ್ದಾಡುತ್ತಿದ್ದಾರೆ. ಅವರ ಮೇಲೆ ಅನಗತ್ಯವಾಗಿ ಮತ್ತೆ ಲಾಕ್ ಡೌನ್ ಹೇರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

ಮೊದಲು ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಿ

ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಚಿವ ಸುಧಾಕರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ನನ್ನ ಬ್ರದರ್ ಸುಧಾಕರ್ ಅವರು ಮೊದಲ ಅಲೆಯಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡಿದರಲ್ಲಾ ಅದಕ್ಕೆ ಸಂಬಂಧಿಸಿದಂತೆ ಮೊದಲು ಪ್ರಕರಣ ದಾಖಲಿಸಿಕೊಳ್ಳಲಿ. ಆಗಲೂ ಮಾರ್ಗಸೂಚಿ ಇತ್ತಲ್ಲವೇ? ಅವರ ಮಕ್ಕಳ ಮೇಲೆ ಹಾಕುವುದು ಬೇಡ. ಮಾರ್ಗಸೂಚಿ ಉಲ್ಲಂಘಿಸಿದ ಶ್ರೀರಾಮುಲು, ಮದುವೆ, ಸಭೆ, ಸಮಾರಂಭಕ್ಕೆ ಹೋಗಿದ್ದ ಯಡಿಯೂರಪ್ಪನವರು, ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಪ್ರಕರಣ ದಾಖಲಿಸಲಿ. ಜನಾಶೀರ್ವಾದ ಯಾತ್ರೆ ಮಾಡಿದ ಕೇಂದ್ರ ಬಿಜೆಪಿ ಮಂತ್ರಿಗಳ ಮೇಲೆ ಪ್ರಕರಣ ದಾಖಲಿಸಲಿ. ಅದನ್ನು ಬಿಟ್ಟು ನನಗೆ ವಾರೆಂಟ್ ಕಳುಹಿಸಿದ್ದಾರೆ’ ಎಂದರು.

ಪಾದಯಾತ್ರೆ ಮಾಡಿಯೇ ತೀರುತ್ತೀರಾ, 9 ರಂದು ವೀಕೆಂಡ್ ಕರ್ಫ್ಯೂ ಇದೆ, ದಿನಾಂಕವೇನಾದರೂ ಬದಲಾಗುತ್ತಾ, ನಿಗದಿಯಂತೆ ಪಾದಯಾತ್ರೆ ಉದ್ಘಾಟನೆಯಾಗುತ್ತಾ ಎಂಬ ಪ್ರಶ್ನೆಗೆ, ‘ನಾವು ಪಾದಯಾತ್ರೆ ಮಾಡುತ್ತಿಲ್ಲ. ನೀರಿಗಾಗಿ ನಡೆಯುತ್ತೇವೆ, ನೀರಿಗಾಗಿ ನಡೆಯಬಾರದೇ? ನಾವು ಮನೆಯಿಂದ ಯಾರು ಹೊರಬಂದು ಓಡಾಡಬಾರದೇ? ಸರಕಾರದ ಯಾರೂ ರಸ್ತೆಯಲ್ಲಿ ಓಡಾಡುವುದಿಲ್ಲವೇ?’ ಎಂದು ಮರುಪ್ರಶ್ನಿಸಿದರು.

ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಪಾದಯಾತ್ರೆ ದಿನಾಂಕ ಬದಲಾವಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ಯಾವ ಬದಲಾವಣೆಯೂ ಇಲ್ಲ. ಯಾರು ಹೇಳಿದ್ದು ಅದು ಪಾದಯಾತ್ರೆ ಎಂದು. ಅದು ನೀರಿಗಾಗಿ ನಡಿಗೆ ಅಷ್ಟೇ. ಈಗಾಗಲೇ ನಮ್ಮ ಶಾಸಕಾಂಗ ಪಕ್ಷದ ನಾಯಕರು, ಕಾರ್ಯಾಧ್ಯಕ್ಷರು, ಬೆಂಗಳೂರು ನಗರ ಪ್ರದೇಶದ ನಾಯಕರ ಜತೆ ಚರ್ಚೆ ಮಾಡುತ್ತೇನೆ. ನಾವು ಕೋವಿಡ್ ಮಾರ್ಗಸೂಚಿ ಅನುಸರಿಸುತ್ತೇವೆ. ನಿಯಮ ಪಾಲಿಸುತ್ತೇವೆ. 100 ಜನ ವೈದ್ಯರ ತಂಡ ಅದಕ್ಕೆ ಸಿದ್ಧವಿದೆ ಎಂದು ವಿವರಿಸಿದರು.

ಸರಕಾರ ವರ್ತಕರು, ವ್ಯಾಪಾರಸ್ಥರ ಮೇಲೆ ಗದಾಪ್ರಹಾರ ಮಾಡುತ್ತಿರುವುದನ್ನು ನೋಡಿ ಸಂಕಟವಾಗುತ್ತಿದೆ. ಅವರ ಬದುಕು ಏನಾಗಬೇಕು. ಎರಡು ವರ್ಷಗಳಿಂದ ಅವರು ಸಾಯುತ್ತಿದ್ದಾರೆ. ಇವರ ರಾಜಕೀಯಕ್ಕಾಗಿ, ನಮ್ಮ ಮೇಲಿನ ದ್ವೇಷಕ್ಕೆ, ವರ್ತಕರು, ವ್ಯಾಪಾರಸ್ಥರು, ಪ್ರವಾಸೋದ್ಯಮದವರು, ಬೀದಿ ವ್ಯಾಪಾರಿಗಳಿಗೆ ಬರೆ ಹಾಕುತ್ತಿದ್ದಾರೆ. ಸರ್ಕಾರ ಅವರನ್ನು ಹತ್ಯೆ ಮಾಡುತ್ತಿದೆ. ಮರ್ಡರ್ ಮಾಡುತ್ತಿದೆ. ಈ ಸರಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ. ಅವರ ಶಾಪ ತಡೆದುಕೊಳ್ಳಲು ಇವರಿಗೆ ಸಾಧ್ಯವಿಲ್ಲ.

ನನ್ನ ಮೇಲೆ, ಶಾಸಕರ ಮೇಲೆ, ಪರಿಷತ್ ಸದಸ್ಯರ ಮೇಲೆ ವಿಪತ್ತು ನಿರ್ವಹಣೆ ಪ್ರಕರಣ ದಾಖಲಿಸಿದ್ದಾರೆ. ಇವರು ಮನುಷ್ಯರಾ? ಅವರ ಪಕ್ಷದ ನಾಯಕರು ಪ್ರತಿಭಟನೆ, ಮೆರವಣಿಗೆ ಮಾಡಿದರು. ನಿನ್ನೆ ಪ್ರಧಾನಿಗಳು ದೊಡ್ಡ ದೊಡ್ಡ ಸಮಾವೇಶ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಡಿ.ಕೆ. ಸುರೇಶ್ ಅವರು ಈಗ ನನ್ನನ್ನು ಭೇಟಿ ಮಾಡಿ, ರಾಮನಗರಕ್ಕೆ ನಡಿಗೆ ಮಾರ್ಗ ನೋಡಲು ಹೋಗುತ್ತಿದ್ದಾರೆ’ ಎಂದರು.

ಜನರ ಪ್ರಾಣ ಮುಖ್ಯ ಎಂಬ ಸಚಿವ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ, ‘ಅವರಿಗೆ ಜನರ ಪ್ರಾಣ ಮುಖ್ಯವಲ್ಲ. ಅವರ ಪಕ್ಷ ಮುಖ್ಯ. ಅವರು ಜನರ ಪ್ರಾಣ ತೆಗೆಯುತ್ತಿದ್ದಾರೆ’ ಎಂದರು.

ಪಾದಯಾತ್ರೆ ಹೆಸರು ಬದಲಾಗುತ್ತದೇಯೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದನ್ನು ಯಾತ್ರೆ ಎಂದು ಯಾಕೆ ಕರೆಯುತ್ತೀದ್ದೀರಿ? ಇದು ನೀರಿಗೋಸ್ಕರ ನಡಿಗೆ’ ಎಂದರು.

ಹಾಗಾದರೆ ಹೆಸರು ಬದಲಿಸುತ್ತೀರಾ, ವಾಹನದ ಮೇಲೆ ಪಾದಯಾತ್ರೆ ಹೆಸರಿದೆಯಲ್ಲಾ ಎಂಬ ಪ್ರಶ್ನೆಗೆ, ‘ಹೆಸರು ಬದಲಿಸಿಕೊಳ್ಳೋಣ ಬಿಡಿ. ನೀರಿಗಾಗಿ ನಡಿಗೆ, Walk for Water’ ಎಂದು ಉತ್ತರಿಸಿದರು.

Join Whatsapp