ಚುನಾವಣೆ ಬಂದಾಗ ಭರವಸೆ ನೀಡಿ ಮತದಾರರನ್ನು ವೋಟ್ ಬ್ಯಾಂಕ್ ಆಗಿ ಉಪಯೋಗಿಸಲಾಗುತ್ತಿದೆ: ಅಫ್ಸರ್ ಕೊಡ್ಲಿಪೇಟೆ ಕಿಡಿ

Prasthutha|

ದಾವಣಗೆರೆ: ಚುನಾವಣೆ ಬಂದಾಗ ಭರವಸೆಗಳನ್ನು ನೀಡಿ ಮತದಾರರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಉಪಯೋಗಿಸಲಾಗುತ್ತಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

SDPI ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಹಾಲಿ ಕ್ಷೇತ್ರದ ಶಾಸಕರು ಚುನಾವಣೆ ಬಂದಾಗ ಮಾತ್ರ ಕ್ಷೇತ್ರಕ್ಕೆ ಭೇಟಿ ಕೊಡುತ್ತಾರೆ, ಕಳೆದ 25 ವರ್ಷಗಳಿಂದ ಶಾಸಕರಾಗಿ ಜನರ ಕಷ್ಟಗಳಿಗೆ ಸ್ಪಂದಿಸದೆ ಮತದಾರರಿಗೆ ಮೋಸ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಇವರ ಕೂಡುಗೆಯೇನು? ಕ್ಷೇತ್ರದಲ್ಲಿ ಸರಿಯಾದ ಒಂದು ಸಾರ್ವಜನಿಕ ಆಸ್ಪತ್ರೆ ಇಲ್ಲದ ಕಾರಣ ಬಡತನ ರೇಖೆಗಿಂತ ಕೆಳಗೆ ಇರುವ ಇಲ್ಲಿನ ಜನರು ಚಿಕಿತ್ಸೆಗಾಗಿ ಪರಿದಾಡುವ ಪರಿಸ್ಥಿತಿ ಇದೆ. ಪ್ರತಿ ಬಾರಿ ಚುನಾವಣೆ ಬಂದಾಗ ವಸತಿಗೃಹ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿ ಹೆಗಡೆ ನಗರ ನಿವಾಸಿಗಳನ್ನು ಕೇವಲ ಮತ ಬ್ಯಾಂಕ್ ಆಗಿ ಉಪಯೋಗಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಇಲ್ಲಿಯವರೆಗೆ ಶಾಶ್ವತ ವಸತಿಗೃಹ ನಿರ್ಮಾಣ ಮಾಡಿಕೊಡಲು ಇಲ್ಲಿನ ಶಾಸಕರಿಗೆ ಸಾಧ್ಯವಾಗಲಿಲ್ಲ. ಪೌರಕಾರ್ಮಿಕರನ್ನು ಖಾಯಂ ಗೊಳಿಸುವುದಾಗಲಿ, ಅವರಿಗೆ ಶಾಶ್ವತ ವಸತಿಗೃಹ ವ್ಯವಸ್ಥೆಯಾಗಲಿ ಹಾಗೂ ಕನಿಷ್ಟಪಕ್ಷ ಅವರ ಸಂಕಷ್ಟಗಳನ್ನು ಆಲಿಸಲೂ ಇಲ್ಲಿನ ಶಾಸಕರು ತಯಾರಿಲ್ಲ. ಇವರು ಚುನಾವಣೆಗಳಲ್ಲಿ ಆಶ್ವಾಸನೆ ನೀಡಿದಂತೆ ಮಂಡಕ್ಕಿ ಬಟ್ಟಿಗಳಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿ ಅಭಿವೃದ್ಧಿ ಮಾಡುವ ಮನಸ್ಸೇ ಮಾಡಲಿಲ್ಲ. ಮಂಡಕ್ಕಿ ಬಟ್ಟಿ ಕಾರ್ಮಿಕರಿಗೆ ಶಾಶ್ವತ ಮನೆ ಇಲ್ಲದ ಕಾರಣ ಬರುವ ಅಲ್ಪಸ್ವಲ್ಪ ಕೂಲಿಯಲ್ಲಿ ಜೀವನ ನಡೆಸುವುದು ಅವರಿಗೆ ಕಷ್ಟವಾಗಿದೆ ಮತ್ತು ಇವರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಕಾರ್ಮಿಕರಿಗಾಗಿ ಲೇವಟ್ ಮಾಡಿ ಮನೆ ನಿರ್ಮಿಸಿ ಕೊಡುವ ಆಶ್ವಾಸನೆ ನೀಡಿ ಅದು ಇಲ್ಲಿಯವರೆಗೆ ಈಡೇರಲಿಲ್ಲ, ಆಶ್ವಾಸನೆಗಳು ಕೇವಲ ಆಶ್ವಾಸನೆಗಳಾಗಿ ಮಾತ್ರ ಉಳಿದಿವೆ ಎಂದು ಅವರು ಹೇಳಿದರು.

- Advertisement -

ಕ್ಷೇತ್ರದಲ್ಲಿ ಇಂತಹ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ ಈ ಬಗ್ಗೆ ಕಾರ್ಯಕರ್ತರು ಕ್ಷೇತ್ರದ ಜನತೆಗೆ ಎಳೆ ಎಳೆಯಾಗಿ ತಿಳಿ ಹೇಳಬೇಕು ಮತ್ತು ಪರ್ಯಾಯ ರಾಜಕೀಯ ವ್ಯವಸ್ಥೆಗೆ SDPI ಪಕ್ಷದ ಅನಿವಾರ್ಯತೆಯ ಕುರಿತು ಜನರಿಗೆ ಮನವರಿಕೆ ಮಾಡುವ ಮೂಲಕ ದಾವಣಗೆರೆಯಲ್ಲಿ ಈಗಾಗಲೇ ಘೋಷಣೆ ಮಾಡಿರುವ ನಮ್ಮ ಅಭ್ಯರ್ಥಿ ಇಸ್ಮಾಯಿಲ್ ಜಬೀವುಲ್ಲಾ ಅವರನ್ನು ಗೆಲ್ಲಿಸುವ ಪ್ರಯತ್ನವನ್ನು ಮಾಡಬೇಕು, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಕರೆಕೊಟ್ಟರು.

 ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಜಿಲ್ಲಾಧ್ಯಕ್ಷರು ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಬೀವುಲ್ಲಾ, ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಾಕ್, ಉಪಾಧ್ಯಕ್ಷರಾದ ರಜ್ವೀ ರಿಯಾಜ್ ಅಹಮದ್ ಮತ್ತು ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Join Whatsapp