ವಿಟ್ಲ | ಶೈಕ್ಷಣಿಕ ಕಾರ್ಯಾಗಾರಕ್ಕೆ ಸಂಘಪರಿವಾರ ದಾಳಿ: SDPI ಖಂಡನೆ

Prasthutha|

- Advertisement -

‘ಇಸ್ಲಾಂ ಮತ ಪ್ರವಚನ ನೀಡಿದ್ದಾರೆ ಎಂಬ ಆರೋಪ ಶುದ್ಧ ಸುಳ್ಳು’

ಬಂಟ್ವಾಳ: ವಿಟ್ಲದ ಅಡ್ಯನಡ್ಕ ಎಂಬಲ್ಲಿ ಖಾಸಗಿ ಶಾಲೆಯು ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರಕ್ಕೆ ಹುಸಿ ಆರೋಪವನ್ನು ಇಟ್ಟುಕೊಂಡು ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿ, ತಡೆಯನ್ನೊಡ್ಡಿರುವ ಕ್ರಮ ತೀವ್ರ ಖಂಡನೀಯ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರ ಎಸ್ ಡಿ ಪಿ ಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

ನುಸ್ರತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಎಂಬ ಸಾಮಾಜಿಕ ಸಂಘಟನೆಯು ನೈತಿಕ ಮತ್ತು ಭೌತಿಕ ಪ್ರಗತಿಯ ಕಾಳಜಿಯನ್ನು ವಹಿಸಿ ಸ್ಥಳೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಾಗಾರವನ್ನು ತಪ್ಪಾಗಿ ಅರ್ಥೈಸಿದ ಸಂಘಪರಿವಾರ ಮತ್ತು ಹಿಂದುತ್ವ ಶಕ್ತಿಗಳು ಇಸ್ಲಾಮಿಕ್ ಪ್ರಬೋಧನೆ ನೀಡಲಾಗಿದೆ ಎಂದು ಆರೋಪಿಸಿ, ಕಾರ್ಯಗಾರವನ್ನು ತಡೆದಿವೆ. ಈ ಆರೋಪವು ಶುದ್ಧ ಸುಳ್ಳು ಎಂದು ನುಸ್ರತುಲ್ ಇಸ್ಲಾಂನ ನಾಯಕರು ಹೇಳಿದ್ದಾರೆ.

ಲಯನ್ಸ್ ಕ್ಲಬ್, ಜೀವನ – ಜ್ಯೋತಿ ಮತ್ತಿತರ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಅನೇಕ ಸಂಘಟನೆಗಳು ಮತ್ತು ಎನ್ ಜಿ ಒ ಗಳು ಶಾಲಾ ವಿದ್ಯಾರ್ಥಿಗಳಿಗೆ
ಕಾರ್ಯಾಗಾರವನ್ನು ಏರ್ಪಡಿಸುವ ಹಾಗೆ ನುಸ್ರತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ಎಂಬ ಸಾಮಾಜಿಕ ಸಂಘಟನೆಯೂ ಒಂದು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಹಾಗೂ ಅಲ್ಲಿನ ಸಂಬಂಧಪಟ್ಟವರ ಅನುಮತಿಯ ಮೇರೆಗೆ ಈ ಶಿಬಿರವನ್ನು ಕೈಗೊಂಡಿದೆ. ಇದರಲ್ಲಿ ತಪ್ಪೇನಿದೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

ಸಂಘಟನೆಯು ಇಸ್ಲಾಮಿಕ್ ಹೆಸರನ್ನು ಹೊಂದಿದ ಕಾರಣ ಸಂಘಪರಿವಾರದ ಕಾರ್ಯಕರ್ತರು ದಾಳಿಯನ್ನು ನಡೆಸಿರುವುದು ದ್ವೇಷ ಮತ್ತು ಅಸೂಯೆಗೆ ಹಿಡಿದ ಕೈಗನ್ನಡಿ ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Join Whatsapp