ವಿಟ್ಲ: ಪ್ರೇಮ ಪ್ರಕರಣ; 18 ವಿದ್ಯಾರ್ಥಿಗಳ ಅಮಾನತು

Prasthutha|

ಬಂಟ್ವಾಳ : ಪ್ರೇಮ ಪ್ರಕರಣ ವಿಚಾರಕ್ಕೆ ಸಂಬಂಧಿಸಿ 18 ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಕಾಲೇಜಿನಿಂದ ಅಮಾನತುಗೊಳಿಸಿದ ಘಟನೆ ವಿಟ್ಲದ ವಿಠಲ್ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ.

- Advertisement -


ಅಮಾನತುಗೊಂಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಾತ್ರ ಕಾಲೇಜಿಗೆ ಬರಬಹುದು ಎಂದು ಸೂಚನೆ ನೀಡಲಾಗಿದೆ.


ಕಾಲೇಜಿನಲ್ಲಿ ದ್ವಿತೀಯ ಪಿ.ಯು ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿ ಮತ್ತು ಹಿಂದೂ ವಿದ್ಯಾರ್ಥಿನಿ ನಡುವಿನ ಪ್ರೇಮ ಪತ್ರ ಪ್ರಕರಣವು ವಿವಾದದ ಸ್ವರೂಪ ಪಡೆದಿದೆ. ಹೀಗಾಗಿ ಪೋಷಕರ ಸಮ್ಮುಖದಲ್ಲಿ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಮಾತುಕತೆ ನಡೆಸಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ.

- Advertisement -


ಕಾಲೇಜಿನ ಆಡಳಿತ ಮಂಡಳಿಯು ಈ ಮೊದಲೇ ವಿದ್ಯಾರ್ಥಿಗಳ ಪೋಷಕರಿಗೆ ಅವರಿಬ್ಬರ ಪ್ರೇಮದ ವಿಚಾರವನ್ನು ಗಮನಕ್ಕೆ ತಂದಿತ್ತು. ಆ ಬಳಿಕ ಯಾವುದೇ ಗೊಂದಲವಿಲ್ಲದೆ ತರಗತಿ ನಡೆಯುತ್ತಿತ್ತು.


ಆದರೆ, ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರೇಮ ಪ್ರಕರಣವು ಮತ್ತೆ ವಿವಾದ ಪಡೆದುಕೊಂಡಿದೆ. ತರಗತಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದುದ್ದನ್ನು ಉಪನ್ಯಾಸಕರು ಪರಿಶೀಲಿಸಲು ಮುಂದಾದಾಗ, ವಿದ್ಯಾರ್ಥಿನಿಯ ಕೈಯಲ್ಲಿ ಪ್ರೇಮಪತ್ರ ಪತ್ತೆಯಾಗಿದೆ.


ಆದರೆ, ಪ್ರೇಮಪತ್ರ ನೀಡಿದ ವಿದ್ಯಾರ್ಥಿ ಅಂದು ಕಾಲೇಜಿಗೆ ಬಂದಿರಲಿಲ್ಲ. ಯುವತಿಯ ಪೋಷಕರಿಗೆ ಈ ವಿಷಯ ತಿಳಿಸಿದ ಕಾಲೇಜು ಆಡಳಿತ ಮಂಡಳಿ, ಪರೀಕ್ಷೆಗೆ ಬರೆಯಲು ಮಾತ್ರ ವಿದ್ಯಾರ್ಥಿನಿಯನ್ನು ಕಾಲೇಜಿಗೆ ಕಳುಹಿಸುವಂತೆ ಸೂಚನೆ ನೀಡಿದೆ.

Join Whatsapp