“ಬೆನ್ನು ಮೂಳೆಯಿಲ್ಲದವರ ಟೀಕೆಗಳಿಗೆ ಉತ್ತರಿಸಲ್ಲ”: ಶಮಿ ವಿರುದ್ಧದ ಧರ್ಮಾಂಧರ ಟೀಕೆಗೆ ಕೊಹ್ಲಿ ತಿರುಗೇಟು

Prasthutha|

ದುಬೈ; ಐಸಿಸಿ T-20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬದ್ದವೈರಿ ಪಾಕಿಸ್ತಾನದ ವಿರುದ್ಧ ಹೀನಾಯವಾಗಿ ಸೋತ ಬಳಿಕ ವ್ಯಾಪಕ ಟೀಕೆಗಳನ್ನು ಎದುರಿಸಿತ್ತು. ಅದರಲ್ಲೂ ತಂಡದ ಸ್ಟಾರ್ ಬೌಲರ್ ಮುಹಮ್ಮದ್ ಶಮಿ ವಿರುದ್ಧ ಕೆಲ ಧರ್ಮಾಂಧರು ಸಾಮಾಜಿಕ ಜಾಲತಾಣಗಳಲ್ಲಿ ಅಸಂಬದ್ಧ ಟೀಕೆಗಳನ್ನು ಹರಿಯ ಬಿಟ್ಟಿದ್ದರು.

- Advertisement -


ಮುಹಮ್ಮದ್ ಶಮಿ ವಿರುದ್ಧದ ಟೀಕೆಗಳಿಗೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್’ ರಂಥ ದಿಗ್ಗಜರು ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಶಮಿ ಬೆಂಬಲಕ್ಕೆ ನಿಂತು ಟ್ವೀಟ್ ಮಾಡಿದ್ದರು.
ಆದರೆ ಇದೀಗ ಸ್ವತಃ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ಕಟು ಶಬ್ದಗಳಲ್ಲಿ ಪ್ರತಿಕ್ರಿಯಿಸಿದ್ದು, “ಬೆನ್ನುಮೂಳೆ ಇಲ್ಲದವರ ಬಗ್ಗೆ ಪ್ರತಿಕ್ರಿಯಿಸಲು ಸಮಯವಿಲ್ಲ” ಎಂದು ಖಾರವಾಗಿಯೇ ನುಡಿದಿದ್ದಾರೆ.


ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಪ್ಟನ್ ಕೊಹ್ಲಿ,
ಮುಹಮ್ಮದ್ ಶಮಿಯವರ ಪ್ರಾಮಾಣಿಕತೆ, ದೇಶದ ಬಗೆಗಿನ ಬದ್ಧತೆಯನ್ನು ಅರ್ಥಮಾಡಿಕೊಳ್ಳದ ಜನರೊಂದಿಗೆ ಒಂದು ನಿಮಿಷವನ್ನು ಸಹ ವ್ಯರ್ಥಮಾಡಲು ನಾನು ಬಯಸುವುದಿಲ್ಲ. ನಾವು ಶಮಿ ಅವರ ಬೆಂಬಲಕ್ಕೆ 200 ಪರ್ಸೆಂಟ್ ನಿಲ್ಲುತ್ತೇವೆ. ತಂಡದಲ್ಲಿನ ನಮ್ಮ ಸಹೋದರತ್ವವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

- Advertisement -


ಒಂದು ಧರ್ಮವನ್ನು ಗುರಿಯಾಗಿಸಿ ಆಕ್ರಮಣ ಮಾಡುವುದು ಒಬ್ಬ ಮಾಡಬಹುದಾದ ಅತ್ಯಂತ ಹೀನಾಯ ಕೃತ್ಯ. ಧರ್ಮ ಎಂಬುದು ಅತ್ಯಂತ ಪವಿತ್ರ ಮತ್ತು ವೈಯಕ್ತಿಕ ವಿಷಯವಾಗಿದೆ. ಯಾವುದೇ ವ್ಯಕ್ತಿಯನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಬಾರದು ಎಂದು ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಹೇಳಿದರು.


ಧರ್ಮದ ಆಧಾರದಲ್ಲಿ ಆಟಗಾರರನ್ನು ನೋಡುವುದು ಸಂಪೂರ್ಣ ತಪ್ಪು. ನಾನು ಯಾರೊಂದಿಗೂ ಈ ರೀತಿ ವರ್ತಿಸಿಲ್ಲ. ಆದರೆ ಇದು ಕೆಲವರ ಕೆಲಸ. ಮುಹಮ್ಮದ್ ಶಮಿ ಟೀಮ್ ಇಂಡಿಯಾದ ಪ್ರಮುಖ ಭಾಗ. ಅವರು ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂತಹ ಟೀಕೆಗಳನ್ನು ಮಾಡುವವರಿಗಾಗಿ ನನ್ನ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ.


ನಮ್ಮದು ಮೈದಾನದಲ್ಲಿ ಆಡುತ್ತಿರುವವರ ಗುಂಪು ಎಂದ ಕೊಹ್ಲಿ, ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡುತ್ತಾ ಕೂರುವ ಬೆನ್ನುಮೂಳೆಯಿಲ್ಲದ ಜನರ ಗುಂಪಲ್ಲ ಎಂದು ತಿಳಿಸಿದರು. ಈ ಮೂಲಕ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಟೀಕೆ ಮಾಡುವವರಿಗೆ ಕೊಹ್ಲಿ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದರು.



Join Whatsapp