►►ಮಕ್ಕಳಿಂದಲೇ ಅಕ್ಕಿ ಮೂಟೆ ಹೊರಿಸಿದ ಶಿಕ್ಷಕರು
ಸುಳ್ಯ: ಇಲ್ಲಿನ ಅಡ್ಕಾರ್ ವಿನೋಬನಗರ ವಿವೇಕಾನಂದ ಶಾಲೆಯ ಅಕ್ಷರ ದಾಸೋಹದ ಅಕ್ಕಿಯನ್ನು ಕನಕಮಜಲು ಸಹಕಾರಿ ಸಂಘದ ಅಡ್ಕಾರು ಶಾಖೆಯ ಪಡಿತರ ಅಂಗಡಿಗೆ ಸಾಗಿಸಿ ಬದಲಿ ಅಕ್ಕಿ ತರಿಸಿಕೊಳ್ಳುತ್ತಿದ್ದಾಗ ಊರವರೇ ತಡೆದು ನಿಲ್ಲಿಸಿ ಅಕ್ಕಿಯನ್ನು ಮರಳಿ ಶಾಲೆಗೆ ಕಳುಹಿಸಿದ ಘಟನೆ ಸೋಮವಾರ ನಡೆದಿದೆ.
ಈ ದುಷ್ಕೃತ್ಯಕ್ಕೆ ಶಾಲಾ ಮಕ್ಕಳನ್ನೇ ಬಳಸಿರುವುದಕ್ಕೆ ಪೋಷಕರು ಮತ್ತು ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಕುರಿತ ವೀಡಿಯೋ ವೈರಲ್ ಆಗಿದೆ. ಮಾತ್ರವಲ್ಲ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ ಕೂಡ ಕೇಳಿಬಂದಿದೆ.
ಜಾಲ್ಸೂರು ಗ್ರಾಮದ ಅಡ್ಕಾರ್ ವಿನೋಬಾನಗರ ವಿವೇಕಾನಂದ ಖಾಸಗಿ ಶಾಲೆಯಲ್ಲಿದ್ದ ಮಕ್ಕಳ ಬಿಸಿಯೂಟಕ್ಕೆ ತಂದಿದ್ದ ಅಕ್ಕಿ ತುಂಬಾ ಹಳೆಯದಾಗಿದ್ದರಿಂದ ಕೊಳೆತು ಹೋಗಿತ್ತು. ವಿನೋಬನಗರ ವಿವೇಕಾನಂದ ಶಾಲೆಯ ಅಕ್ಷರ ದಾಸೋಹದ ಹಳೆಯ ಸ್ಟಾಕ್ ಅಕ್ಕಿಯು ಹುಳ ತುಂಬಿದೆ ಎಂದು ಶಾಲಾ ಆಡಳಿತ ಮಂಡಳಿ ಆರೋಪಿಸಿತ್ತು. ಮಂಡಳಿಯ ಸೂಚನೆಯಂತೆ ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಮಕ್ಕಳನ್ನು ಉಪಯೋಗಿಸಿ ಶಾಲೆಯ 10 ಕ್ವಿಂಟಾಲ್ ಅಕ್ಕಿಯನ್ನು ಅಡ್ಕಾರ್ ಸೊಸೈಟಿಯ ಪಡಿತರ ಅಂಗಡಿಗೆ ಸಾಗಿಸಿ ಅನ್ಲೋಡ್ ಮಾಡಿಸಿದ್ದಾರೆ. ಮಾತ್ರವಲ್ಲ ಬದಲಿ 10 ಕ್ವಿಂಟಾಲ್ ಅಕ್ಕಿಯನ್ನು ಶಾಲೆಗೆ ಸಾಗಿಸುತ್ತಿದ್ದಾಗ ಊರವರು ಇದನ್ನು ಗಮನಿಸಿದ್ದಾರೆ. ತಕ್ಷಣ ಊರವರು ಒಟ್ಟಾಗಿ ವಾಹನವನ್ನು ತಡೆದು ಅಕ್ಕಿಯನ್ನು ವಾಪಸು ಕಳಿಸಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ ವಿವೇಕಾನಂದ ಶಾಲಾ ಆಡಳಿತ ಮಂಡಳಿಯ ಸೂಚನೆಯಂತೆ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ್ ಕಾರಿಂಜ, ಕನಕಮಜಲು ಪ್ರಾಥಮಿಕ ಕ್ರಷಿ ಪತ್ತಿನ ಸಂಘದ ಅಡ್ಕಾರ್ ಶಾಖಾ ಮ್ಯಾನೇಜರ್ ಗಂಗಾಧರ್ ಅಡ್ಕಾರ್ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯ ಉದ್ಯಮಿ ಅಡ್ಕಾರ್ ಗೋಡಂಬಿ ಕಾರ್ಖಾನೆ ಮಾಲಕ ಉಪೇಂದ್ರ ಕಾಮತ್ ಅಧ್ಯಕ್ಷರಾಗಿರುವ ಈ ಶಾಲೆ, ಸರ್ಕಾರಿ ಅನುದಾನಿತವಾಗಿದ್ದರೂ, ಇಲ್ಲಿನ ಆಡಳಿತ ಮಂಡಳಿಯವರು ಸಂಘಪರಿವಾರ ಮತ್ತು ಬಿಜೆಪಿ ಬೆಂಬಲಿತರಾಗಿದ್ದಾರೆ. ಮಕ್ಕಳಿಗೆ ಅನ್ನ ಹಾಕುವ ಬದಲು ಮಕ್ಕಳ ಹೊಟ್ಟೆಗೆ ಹುಳ ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಕ್ಕಳ ಆಟವಾಡಬೇಕಾದ ಶಾಲಾ ಮೈದಾನದಲ್ಲಿ ಕಟ್ಟಡ ನಿರ್ಮಿಸಿ ಅನ್ಯಾಯವೆಸಗಲಾಗಿದೆ. ಅಷ್ಟಕ್ಕೂ ಅಲ್ಲಿನ ಹುಳುಕು ಅಕ್ಕಿಯನ್ನು ಸೊಸೈಟಿಗೆ ಕೊಟ್ಟು ಊರವರು ತಿನ್ನುವಂತೆ ಮಾಡುವ ಹುನ್ನಾರ ನಡೆದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಬಗ್ಗೆ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ನಿರ್ಲಕ್ಷವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಮಕ್ಕಳನ್ನು ಅಕ್ರಮಕ್ಕೆ ಬಳಸಿ, ಅವರನ್ನು ಅಕ್ಕಿಯ ಮೂಟೆ ಎತ್ತುವಂತೆ ಮಾಡಿದ ಹಾಗೂ ಅಕ್ರಮ ಎಸಗಿದ ಶಾಲಾ ಮುಖ್ಯೋಪಾಧ್ಯಾಯ ಹಾಗೂ ದುಷ್ಕೃತ್ಯಕ್ಕೆ ಸಹಕರಿಸಿದ ಸೊಸೈಟಿ ಮ್ಯಾನೇಜರ್ ಮೇಲೂ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.