ಉತ್ತರ ಪ್ರದೇಶ | ಹೊಸದಾಗಿ ಚುನಾಯಿತರಾಗಿದ್ದ ಗ್ರಾಮ ಪ್ರಧಾನ್ ಗೆ ಗುಂಡಿಟ್ಟು ಹತ್ಯೆ; ಇಬ್ಬರ ಬಂಧನ

Prasthutha|

ಲಖನೌ : ಉತ್ತರ ಪ್ರದೇಶದ ಬರೇಲ್ವಿ ಜಿಲ್ಲೆಯ ಪರಗ್ವಾನ್ ಗ್ರಾಮ ಪಂಚಾಯತ್ ಗೆ ನೂತನವಾಗಿ ಚುನಾಯಿತರಾಗಿದ್ದ ಪ್ರಧಾನ್ (ಪಂಚಾಯತ್ ಮುಖ್ಯಸ್ಥ)ರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುರುವಾರ ಸಂಜೆ ಅಲ್ಲಿನ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆದಿದೆ.

- Advertisement -

ಮುಹಮ್ಮದ್ ಇಸಾಕ್ ಮೃತಪಟ್ಟವರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಇಸಾಕ್ ವಿರುದ್ಧ ಸೋತ ಇಬ್ಬರು ರಾಜಕೀಯ ಪ್ರತಿಸ್ಪರ್ಧಿಗಳು ಈ ಕೃತ್ಯವೆಸಗಿದ್ದಾರೆ ಎಂದು ಎಫ್ ಐಆರ್ ನಲ್ಲಿ ತಿಳಿಸಲಾಗಿದೆ. ಅವರಲ್ಲಿ ಒಬ್ಬನನ್ನು ಶುಕ್ರವಾರ ಆತನ ಪುತ್ರನೊಂದಿಗೆ ವಶಕ್ಕೆ ಪಡೆಯಲಾಗಿದೆ.

ಇಸಾಕ್, ಅವರ ಪತ್ನಿ ಸಕಿನಾ ಮತ್ತು ತಂಗಿ ಶೀಬಾ ರಾಣಿ ಅವರು ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇಸಾಕ್ ಅವರನ್ನು ಗುರಿಯಾಗಿಸಿ ಮೂರು ಸುತ್ತಿನ ಗುಂಡು ಹಾರಿಸಲಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತ್ನಿಗೂ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ವೈದ್ಯರು ವೈದ್ಯಕೀಯ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ. ಶೀಬಾಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಇಸಾಕ್ ಅವರು ಇತ್ತೀಚೆಗೆ ಚುನಾವಣೆಯಲ್ಲಿ ಗೆದ್ದ ನಂತರ, ಗ್ರಾಮದ ಮಾಜಿ ಮುಖ್ಯಸ್ಥರಾದ ಮೋಹರ್ ಸಿಂಗ್ ಮತ್ತು ರತನ್ ಲಾಲ್ ಅವರು ಆಗಾಗ್ಗೆ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ. ಅವರಿಬ್ಬರೂ ನೆರೆಹೊರೆಯವರಾಗಿದ್ದಾರೆ. ಇವರಿಬ್ಬರಲ್ಲದೆ ಎಫ್ಐಆರ್ ನಲ್ಲಿ ಮೋಹರ್ ಸಿಂಗ್ ಅವರ ಪುತ್ರ ಅನುರಾಗ್ ಸಿಂಗ್, ಸಂಬಂಧಿ ಭಗವತ್ ಮತ್ತು ರತನ್ ಲಾಲ್ ಅವರ ಪುತ್ರ ರಾಹುಲ್ ಅವರ ಹೆಸರು ಕೂಡ ದಾಖಲಾಗಿದೆ. ಪೊಲೀಸರು ರತನ್ ಲಾಲ್ ಮತ್ತು ರಾಹುಲ್ ಅವರನ್ನು ವಶಕ್ಕೆ ಪಡೆದಿದ್ದು, ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಬರೇಲ್ವಿ ನಗರ ಸಹಾಯಕ ಪೊಲೀಸ್ ಆಯುಕ್ತ ರವೀಂದ್ರ ಕುಮಾರ್ ತಿಳಿಸಿದ್ದಾರೆ.

ತನ್ನ ಸಹೋದರ ಚುನಾವಣೆಯಲ್ಲಿ ಗೆದ್ದ ನಂತರ, ರತನ್ ಲಾಲ್ ಮತ್ತು ಮೋಹರ್ ಸಿಂಗ್ ತನಗೂ ಮತ್ತು ಇಡೀ ಕುಟುಂಬಕ್ಕೂ ಬೆದರಿಕೆ ಹಾಕಲು ಪ್ರಾರಂಭಿಸಿದರು ಎಂದು ಶೀಬಾ ರಾಣಿ ತಿಳಿಸಿದ್ದಾರೆ.

ಅವರು ನಮಗೆ ಬೆದರಿಕೆ ಹಾಕುತ್ತಿರುವ ಆಡಿಯೊ ರೆಕಾರ್ಡಿಂಗ್ ನಮ್ಮ ಬಳಿ ಇವೆ, ಇದರಲ್ಲಿ ಹಲ್ಲೆಕೋರರು ನಮ್ಮನ್ನು ಬೆದರಿಸುವುದನ್ನು ಕೇಳಬಹುದು. ಈ ಬೆದರಿಕೆಗಳು ನಿಲ್ಲಬಹುದು ಎಂದು ಭಾವಿಸಿದ್ದರಿಂದ ನಾವು ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಶೀಬಾ ತಿಳಿಸಿದ್ದಾರೆ.

ಶೀಬಾ ಗುರುವಾರ ಮಧ್ಯಾಹ್ನ ತನ್ನ ಸಹೋದರ ಮತ್ತು ಅತ್ತಿಗೆಯೊಂದಿಗೆ ಔಷಧಿ ತರಲು ನಗರಕ್ಕೆ ಹೋಗಿದ್ದಳು. ಸಂಜೆ ಮನೆಗೆ ತೆರಳುತ್ತಿದ್ದಾಗ ಆರೋಪಿಗಳು ಉಮರಿಯಾ ಕ್ರಾಸಿಂಗ್ ಬಳಿ ಅಡಗಿ ಕುಳಿತಿದ್ದ ಮರಗಳ ಹಿಂದಿನಿಂದ ರಸ್ತೆಗೆ ಬಂದು ಬೈಕ್ ಗೆ ಅಡ್ಡವಾಗಿ ನಿಂತರು. ಈ ವೇಳೆ ತೀವ್ರ ಮಾತಿನ ಚಕಮಕಿ ನಡೆಯಿತು. ನಂತರ, ಅವರು ಇಸಾಕ್ ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಇಸಾಕ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆರೋಪಿಗಳು ಬೆನ್ನಟ್ಟಿ ಅವರನ್ನು ಹತ್ಯೆ ಮಾಡಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗುಂಡಿನ ಶಬ್ಧ ಕೇಳಿ ಹತ್ತಿರದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜನರು ಸ್ಥಳಕ್ಕೆ ಧಾವಿಸಿದರು. ಗುಂಪನ್ನು ನೋಡಿ ಬಂದೂಕುಧಾರಿಗಳು ಓಡಿಹೋಗಿದ್ದಾರೆ ಎಂದು ಶೀಬಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದ ತಕ್ಷಣ ಪರಗವಾನ್ ನಿವಾಸಿಗಳು ಇಸಾಕ್ ಅವರ ಕುಟುಂಬದ ಇತರ ಸದಸ್ಯರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಜನರು ಮತ್ತು ನೆರೆಯ ಗ್ರಾಮಗಳ ನಿವಾಸಿಗಳು ಕೊಲೆ ನಡೆದ ಸ್ಥಳಕ್ಕೆ ಬಂದು ಪ್ರತಿಭಟನೆ ನಡೆಸಿದರು. ಮೃತದೇಹಗಳನ್ನು ತೆಗೆದುಕೊಂಡು ಹೋಗಲು ಅವರು ಪೊಲೀಸರಿಗೆ ಅವಕಾಶ ನೀಡಲಿಲ್ಲ. ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ ಕುಳಿತರು. ವಿಷಯ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆರೋಪಿಗಳ ಬಂಧನದ ಭರವಸೆ ನೀಡಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು.

ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪರಗವಾನ್ನಲ್ಲಿ ಪೊಲೀಸ್ ಪಡೆ ಮತ್ತು ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.



Join Whatsapp