ಠಾಣೆಯಲ್ಲಿ ದಲಿತ ಯುವಕನಿಗೆ ಮೂತ್ರ ಕುಡಿಸಿದ್ದ ಪಿಎಸ್‌ ಐ ವಿರುದ್ಧ ಕೇಸ್‌ ದಾಖಲು

Prasthutha|

ಚಿಕ್ಕಮಗಳೂರು : ಇಲ್ಲಿನ ಕಿರಗುಂದ ಗ್ರಾಮದ ದಲಿತ ಯುವಕನೊಬ್ಬನಿಗೆ ಗೋಣಿಬೀಡು ಪೊಲೀಸ್‌ ಠಾಣೆಯಲ್ಲಿ ಮೂತ್ರ ಕುಡಿಸಿದ ಪಿಎಸ್‌ ಐ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಗೋಣಿಬೀಡು ಪೊಲೀಸ್‌ ಠಾಣೆಯ ಪಿಎಸ್‌ ಐ ಅರ್ಜುನ್‌ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದ ಯುವಕ ಪುನೀತ್‌ ಮೇಲೆ ನಡೆಸಿದ ಅಮಾನವೀಯ ಹಿಂಸೆಗೆ ರಾಜ್ಯಾದ್ಯಂತ ಕನ್ನಡಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಪಿಎಸ್‌ ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಾದ್ಯಂತ ಒತ್ತಾಯ ಕೇಳಿಬಂದಿತ್ತು.

- Advertisement -

ಐಪಿಸಿ ಕಲಂ 342, 323, 504 ಸೇರಿದಂತೆ, ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪಿಎಸ್‌ ಐ ವಿರುದ್ಧ ದಾಖಲಾಗಿದೆ. ತನಿಖೆ ನಡೆಸಿ ಪಿಎಸ್‌ ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿರಿ ಪೊಲೀಸ್‌ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಪುನೀತ್‌ ನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಠಾಣೆಗೆ ಕರೆದೊಯ್ದು ಅಮಾನವೀಯ ಹಿಂಸೆ ನೀಡಿದ್ದುದಲ್ಲದೆ, ಠಾಣೆಯಲ್ಲಿ ಕಳ್ಳತನ ಆರೋಪದಲ್ಲಿ ಬಂಧಿತನಾಗಿದ್ದ ಇನ್ನೊಬ್ಬ ವ್ಯಕ್ತಿಯ ಮೂತ್ರ ಕುಡಿಸಿದ್ದ ಆರೋಪ ಕೇಳಿಬಂದಿತ್ತು. ಅಲ್ಲದೆ, ನೆಲಕ್ಕೆ ಬಿದ್ದಿದ್ದ ಮೂತ್ರವನ್ನು ನೆಕ್ಕಿಸಿದ್ದ ಆರೋಪವೂ ಕೇಳಿಬಂದಿತ್ತು.

ಈ ವಿಷಯ ವರದಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪಿಎಸ್‌ ಐ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು.

- Advertisement -