ನವದೆಹಲಿ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ನಲ್ಲಿ ಮುಸ್ಲಿಮರನ್ನು ಕೊಲ್ಲಿರಿ, ಆಯುಧಗಳನ್ನು ಬಳಸಿರಿ ಎಂಬ ಜನಾಂಗೀಯ ದ್ವೇಷ ಭಾಷಣ ಮಾಡಿದವರ ಜೊತೆಗೆ ಪೊಲೀಸ್ ಅಧಿಕಾರಿಯೊಬ್ಬರು ನಗುತ್ತಿರುವ ವೀಡಿಯೋವೊಂದು ಹೊರಬಿದ್ದಿದೆ.
ಪೊಲೀಸ್ ಅಧಿಕಾರಿಯನ್ನು ತೋರಿಸಿ, “ಅವರು ನಮ್ಮ ಕಡೆಗಿದ್ದಾರೆ, ಇಲ್ಲ ಎಂದವರಾರು?” ಎಂದು ಅಲ್ಲಿರುವ ವ್ಯಕ್ತಿಯೊಬ್ಬರು ಹೇಳುತ್ತಿರುವುದು ವೀಡಿಯೋದಲ್ಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐವರು ನಿನ್ನೆ ಹರದ್ವಾರ ಪೊಲೀಸ್ ಠಾಣೆಗೆ ಇಸ್ಲಾಮಿಕ್ ಖಲೀಫರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮನವಿ ಸಲ್ಲಿಸಲು ಹೋಗಿದ್ದರು. ಆದರೆ ಯಾವುದೇ ಎಫ್ ಐಆರ್ ಸಲ್ಲಿಕೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಾಕೇಶ್ ಕತಾಯಿತ್ ಎಂಬ ಪೊಲೀಸ್ ಅಧಿಕಾರಿಯು ಹಲವು ದ್ವೇಷ ಭಾಷಣಕಾರರ ಜೊತೆ ನಗುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಹಿಂದೂ ರಕ್ಷಾ ಸೇನೆಯ ಧರ್ಮ ಸಂಸತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಬೋಧಾನಂದ ಗಿರಿ, ಹಿಂದುತ್ವ ನಾಯಕರಾದ ಯತಿ ನರಸಿಂಹಾನಂದ್, ಪೂಜಾ ಶಾಕುನ್ ಪಾಂಡೆ ಅಲಿಯಾಸ್ ಸಾದ್ವಿ ಅನ್ನಪೂರ್ಣ, ಶಂಕರಾಚಾರ್ಯ ಪರಿಷತ್ತಿನ ಮುಖ್ಯಸ್ಥ ಆನಂದ ಸ್ವರೂಪ್, ವಾಸೀಮ್ ರಿಝ್ವಿ ಅಲಿಯಾಸ್ ಜಿತೇಂದ್ರ ನಾರಾಯಣ್ ಭಾಗವಹಿಸಿದ್ದು, ಹರದ್ವಾರ್ ದ್ವೇಷ ಭಾಷಣದ ಸಂಬಂಧ ಉತ್ತರಾಖಂಡ ಪೊಲೀಸರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
“ನೀವು ಒಂದು ಮೆಸೇಜ್ ಕಳುಹಿಸಿ, ಪಕ್ಷಪಾತಿ ಎನಿಸಿಕೊಳ್ಳುವುದು ಬೇಡ” ಎಂದು ಪೂಜಾ ಶಾಕುನ್ ಪಾಂಡೆ ಅಲಿಯಾಸ್ ಸಾದ್ವಿ ಅನ್ನಪೂರ್ಣ ಹೇಳುವುದು ವೀಡಿಯೋದಲ್ಲಿದೆ. ಖಲೀಫರ ವಿರುದ್ಧ ದೂರು ನೀಡುತ್ತಾ, ನೀವು ಸಾರ್ವಜನಿಕ ಅಧಿಕಾರಿ, ಪ್ರತಿಯೊಬ್ಬರನ್ನೂ ಸಮಾನವಾಗಿ ನೋಡಬೇಕು. ನಾವು ನಿಮ್ಮಿಂದ ನಿರೀಕ್ಷಿಸುವುದು ಅಷ್ಟೆ. ಆಗ ನೀವು ಸದಾ ಗೆಲ್ಲುತ್ತೀರಿ ಎಂದು ಆಕೆ ಹೇಳುತ್ತಾರೆ.
ಪಕ್ಕದಲ್ಲಿದ್ದ ಯತಿ ನರಸಿಂಹಾನಂದರು ಹಿಂದಿಯಲ್ಲಿ ಅವರು ನಮ್ಮ ಪರವಾಗಿ ಇದ್ದಾರೆ ಎಂದು ಹೇಳುತ್ತಾರೆ.
ಆಗ ಅಲ್ಲಿದ್ದ ಎಲ್ಲರೂ ಜೋರಾಗಿ ನಗುತ್ತಾರೆ. ಪೊಲೀಸ್ ಅಧಿಕಾರಿ ಕೂಡ ಸಂತೋಷದಿಂದ ನಗುತ್ತ ಪಕ್ಕಕ್ಕೆ ಆಗಲಿ ಎಂಬಂತೆ ತಲೆಯಾಡಿಸುತ್ತಾರೆ.
ಡಿಸೆಂಬರ್ 17ರಿಂದ 20ರವರೆಗೆ ನಡೆದ ಹರದ್ವಾರ್ ಘಟನೆಯ ಬಗೆಗಿನ ವೀಡಿಯೋ ಕ್ಲಿಪ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಬರುತ್ತಲೇ ಎಲ್ಲೆಡೆ ಅದಕ್ಕೆ ಖಂಡನೆ ವ್ಯಕ್ತವಾಗಿದೆ. ಮಾಜಿ ಸೇನಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಖ್ಯಾತ ಟೆನ್ನಿಸ್ ಪಟು ಮಾರ್ಟಿನಾ ನವ್ರಾಟಿಲೋವಾ ಸಹಿತ ವಿದೇಶೀಯರು ಸಹ ಖಂಡಿಸಿದ್ದಾರೆ.
ಧರ್ಮ್ ಸಂಸತ್ ಆಯೋಜಿಸಿದವರು ಮತ್ತು ದ್ವೇಷ ಭಾಷಣ ಮಾಡಿದ ಎಲ್ಲರೂ ತಾವು ಸರಿಯಾದುದನ್ನೇ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
“ನಾನು ನೀಡಿದ ಹೇಳಿಕೆ ಬಗ್ಗೆ ನಾಚಿಕೆ ಪಡಬೇಕಾದುದು ಏನೂ ಇಲ್ಲ. ನಾನು ಪೊಲೀಸರಿಗೆ ಬೆದರುವುದಿಲ್ಲ. ನನ್ನ ಹೇಳಿಕೆಗೆ ನಾನು ಬದ್ಧನಾಗಿರುತ್ತೇನೆ” ಎನ್ನುತ್ತಾರೆ ಪ್ರಬೋಧಾನಂದ ಗಿರಿ.
ಇವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ದಾಮಿ ಹಾಗೂ ಹತ್ತಾರು ಮಂದಿ ಬಿಜೆಪಿ ನಾಯಕರ ಜೊತೆ ಇರುವ ಫೋಟೋಗಳು ಲಭ್ಯವಿವೆ ಎಂದು ಎನ್ ಡಿ ಟೀವಿ ಡಿಸೆಂಬರ್ 23ರಂದು ವರದಿ ಮಾಡಿದೆ.
ಇನ್ನೊಂದು ವೀಡಿಯೋ ಕ್ಲಿಪ್ ನಲ್ಲಿ ಪೂಜಾ ಶಾಕುನ್ ಪಾಂಡೆ ಮುಸ್ಲಿಂ ವಿರುದ್ಧ ದಾಳಿಯ ಬಗ್ಗೆ ಹೇಳುವುದೂ ವೈರಲ್ ಆಗಿದೆ. “ನೀವು ಅವರನ್ನು ಮುಗಿಸಬೇಕೆಂದಿದ್ದೀರಾ ಹಾಗಾದರೆ ಅವರನ್ನು ಕೊಲ್ಲಿರಿ. ನಮಗೆ 100 ಜನ ಸೈನಿಕರು ಬೇಕು, 20 ಲಕ್ಷ ಮುಸ್ಲಿಮರನ್ನು ಕೊಂದು ವಿಜಯ ಸಾಧಿಸಬಹುದು” ಎಂದಾಕೆ ಹೇಳುತ್ತಾರೆ.
ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಸಾಕೇತ್ ಗೋಕಲೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಾದರೂ ಇದುವರೆಗೆ ಯಾರನ್ನೂ ಪೊಲೀಸರು ಬಂಧಿಸಿಲ್ಲ.