ಕೈಯಲ್ಲಿ ಮಗುವಿದ್ದರೂ ಅಟ್ಟಾಡಿಸಿ ಥಳಿಸಿ ಕ್ರೌರ್ಯತೆ ಮೆರೆದ ಪೊಲೀಸರು
ಲಕ್ನೋ: ಪುಟಾಣಿ ಮಗುವಿನೊಂದಿಗೆ ಇದ್ದ ವ್ಯಕ್ತಿಗೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಕಾನ್ಪುರದ ದೇಹತ್ ನ ಅಕ್ಬರ್‌ಪುರದಿಂದ ವರದಿಯಾಗಿದೆ.
ಕೈಯಲ್ಲಿ ಮಗುವನ್ನು ಹಿಡಿದುಕೊಂಡಿರುವ ವ್ಯಕ್ತಿಗೆ ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಒಬ್ಬರು ಲಾಠಿಯಿಂದ ಅಟ್ಟಾಡಿಸಿಕೊಂಡು ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಾತ್ರವಲ್ಲ ಇನ್ನೊಬ್ಬ ಅಧಿಕಾರಿ ವ್ಯಕ್ತಿಯ ಕೈಯಿಂದ ಮಗುವನ್ನು ಎಳೆದಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಉತ್ತರಪ್ರದೇಶ ಪೊಲೀಸರ ಈ ಅಮಾನವೀಯ ಕ್ರೌರ್ಯಕ್ಕೆ ನೆಟ್ಟಿಗರಿಂದ ಭಾರೀ ಅಕ್ರೋಶ ವ್ಯಕ್ತವಾಗಿದೆ.
ಜಿಲ್ಲಾ ಆಸ್ಪತ್ರೆಯ ಸಮೀಪದಲ್ಲಿ ಕೆಲವು ದುಷ್ಕರ್ಮಿಗಳು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಆರೋಪಿಗಳ ಬಂಧನದ ವೇಳೆ ಈ ಘಟನೆ ನಡೆದಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ರೀತಿ ಮಾಡಿದ್ದಾರೆ ಎಂದು ಕಾನ್ಪುರ್ ದೇಹತ್ ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಚೌರಾಸಿಯಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.