ರೈತರ ಹೋರಾಟ ಅಂತ್ಯ: ಪ್ರಜಾಪ್ರಭುತ್ವದ ವಿಜಯ ಎಂದು ಬಣ್ಣಿಸಿದ ಹರ್ಸಿಮ್ರತ್ ಬಾದಲ್

Prasthutha|

ನವದೆಹಲಿ: ಒಂದು ವರ್ಷದ ಹೋರಾಟವನ್ನು ಅಂತ್ಯಗೊಳಿಸಿದ ರೈತರ ನಡೆಯನ್ನು ಸ್ವಾಗತಿಸಿದ ಶಿರೋಮಣಿ ಅಕಾಲಿದಳದ ನಾಯಕಿ ಹರ್ಸಿಮ್ರತ್ ಬಾದಲ್, ಇದೊಂದು ಪ್ರಜಾಪ್ರಭುತ್ವದ ವಿಜಯ ಎಂದು ಬಣ್ಣಿಸಿದ್ದಾರೆ.

- Advertisement -

ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಮೋದಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಬಾದಲ್, ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ರೈತರು ಆಂದೋಲನವನ್ನು ಸ್ಥಗಿತಗೊಳಿಸಿದ್ದರೂ, ಅವರು ಅನುಭವಿಸಿದ ಸಂಕಷ್ಟ ಮರೆಯಾಗಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಅವರು ತಿಳಿಸಿದರು.

- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆಯ ವೇಳೆ 700 ಕ್ಕೂ ಅಧಿಕ ರೈತರು ಮೃತಪಟ್ಟಿದ್ದು, ಚಳಿ ಮತ್ತು ಬಿಸಿಲನ್ನು ಲೆಕ್ಕಿಸದೇ ಮಹಿಳೆ, ವಯೋವೃದ್ಧರು ಪ್ರತಿಭಟನೆ ನಡೆಸಬೇಕಾಯಿತು. ಪ್ರತಿಭಟನಾಕಾರರನ್ನು ಖಲಿಸ್ತಾನಿಗಳು ಎಂದು ಜರಿಯಲಾಯಿತು. ಈ ಎಲ್ಲಾ ನೋವು ಮರೆಯುವಂತಾಗಲೂ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಬಾದಲ್ ಸುದ್ದಿಗಾರರಿಗೆ ತಿಳಿಸಿದರು.

ಅಕಾಲಿದಳ ಮತ್ತೆ ಎನ್.ಡಿ.ಎ ಯೊಂದಿಗೆ ಮೈತ್ರಿಯಲ್ಲಿ ಮುಂದುವರಿಯುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾದಲ್, ಅಕಾಲಿದಳ ಜನರ ಸಮಸ್ಯೆ ಮತ್ತು ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಎನ್.ಡಿ.ಎ ಮೈತ್ರಿಕೂಟದಿಂದ ಈಗಾಗಲೇ ಹೊರ ಬಂದಿರುವುದಾಗಿ ತಿಳಿಸಿದರು.

ನಲ್ವತ್ತು ರೈತ ಸಂಘಗಳ ಒಕ್ಕೂಟ ವ್ಯವಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ಒಂದು ವರ್ಷದ ಅವಧಿಯ ಚಳುವಳಿಯನ್ನು ಅಮಾನತುಗೊಳಿಸಲು ನಿರ್ಧರಿಸಿದೆ. ಮಾತ್ರವಲ್ಲ ಡಿಸೆಂಬರ್ 11 ರಂದು ದೆಹಲಿಯ ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಲಿದ್ದಾರೆ ಎಂದು ಹೇಳಲಾಗಿದೆ.

Join Whatsapp