ಲಸಿಕೆ ಬ್ಲಾಕಿಂಗ್‌ ಪ್ರಕರಣ | ಬಿಜೆಪಿ ಶಾಸಕ ಸುಬ್ರಹ್ಮಣ್ಯ ವಿರುದ್ಧ ದೂರು ದಾಖಲು

Prasthutha|

ಬೆಂಗಳೂರು : ಕೋವಿಡ್‌ ಲಸಿಕೆಯನ್ನು ಅಕ್ರಮವಾಗಿ ಮಾರಲಾಗುತ್ತಿದೆ ಎಂದು ಆರೋಪಿಸಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಆರ್‌ ಟಿಐ ಕಾರ್ಯಕರ್ತ ಎಚ್.ಎಂ. ವೆಂಕಟೇಶ್‌ ದೂರು ನೀಡಿದ್ದಾರೆ. ಉಚಿತವಾಗಿ ನೀಡಬೇಕಾದ ಲಸಿಕೆಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

ಲಸಿಕೆ ಪಡೆಯುವ ಬಗ್ಗೆ ವಿಚಾರಿಸುವ ನೆಪದಲ್ಲಿ ವೆಂಕಟೇಶ್‌ ಬೆಂಗಳೂರಿನ ಎರಡು ಆಸ್ಪತ್ರೆಗಳಿಗೆ ಕರೆ ಮಾಡಿದಾಗ ಶಾಸಕ ರವಿ ಸುಬ್ರಹ್ಮಣ್ಯ ಅವರ ಹೆಸರು ಕೇಳಿಬಂದಿದೆ. ನಗರದ ಹೊಸಕೆರೆಹಳ್ಳಿಯ ಅನುಗ್ರಹ ವಿಠಲ (ಎವಿ) ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆ ಮಾಡಿರುವ ವೆಂಕಟೇಶ್‌ ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿದ ಆಡಿಯೊ ತುಣುಕನ್ನೂ ದೂರಿನ ಜೊತೆ ಸಲ್ಲಿಸಿದ್ದಾರೆ.

ಈ ಆಡಿಯೊ ಈಗಾಗಲೇ ಸಾಮಾಜಿಕ ಜಾತಲಾಣಗಳಲ್ಲೂ ಹರಿದಾಡುತ್ತಿದೆ. ಫೋನ್‌ ಕರೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಮಾತನಾಡುತ್ತಾ, ರವಿ ಸುಬ್ರಹ್ಮಣ್ಯ ಅವರ ಕಡೆಯಿಂದಲೇ ಲಸಿಕೆ ಸರಬರಾಜು ಆಗುವುದಾಗಿಯೂ, ಲಸಿಕೆ ಮಾರಾಟವಾದ ಹಣದಲ್ಲಿ ಅವರಿಗೂ ಸಂದಾಯವಾಗುವುದಾಗಿಯೂ ಹೇಳಿದ್ದಾರೆ.

- Advertisement -

ನನಗೆ ಮತ್ತು ಮಗನಿಗೆ ಲಸಿಕೆ ಬೇಕಿತ್ತು ಎಂದು ವೆಂಕಟೇಶ್‌ ಆಸ್ಪತ್ರೆ ಸಿಬ್ಬಂದಿ ಜೊತೆ ಮಾತನಾಡುತ್ತಾ ಕೇಳಿದ್ದಾರೆ. ಲಸಿಕೆಗೆ ನೋಂದಣಿ ಮಾಡಿಕೊಳ್ಳಿ, ಕನ್ಫರ್ಮೇಶನ್‌ ಮೆಸೆಜ್‌ ಬಂದರೆ ಬನ್ನಿ. ಶಾಸಕ ರವಿ ಸುಬ್ರಹ್ಮಣ್ಯ ಕಚೇರಿ ಅಥವಾ ವಾಸವಿ ಆಸ್ಪತ್ರೆಯಿಂದ ಅನುಮತಿ ಕೊಡುತ್ತಾರೆ. ಅದನ್ನು ತೆಗೆದುಕೊಂಡು ಬನ್ನಿ. ಲಸಿಕೆಗೆ ೯೦೦ ರೂ. ಇದೆ. ಆ ದುಡ್ಡು ನಮಗೆ ಬರುವುದಿಲ್ಲ. ಅದು ಸುಬ್ರಹ್ಮಣ್ಯ ಕಚೇರಿಗೆ ಹೋಗುತ್ತದೆ ನಮಗೆ ಇನ್ನೂ ಲಸಿಕೆ ಬಂದಿಲ್ಲ. ಅವರ ಕಡೆಯವರೇ ಆಸ್ಪತ್ರೆಗೆ ಲಸಿಕೆ ಹಾಕಿ ಹೋಗುತ್ತಾರೆ. ನಮ್ಮ ಆಸ್ಪತ್ರೆ ಸಿಬ್ಬಂದಿ ಕೂಡ ಹಣಕೊಟ್ಟು ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಆಸ್ಪತ್ರೆ ಸಿಬ್ಬಂದಿ ಉತ್ತರಿಸುತ್ತಾರೆ.

Join Whatsapp