ಮಕ್ಕಳ ಮೇಲೆ ಲಸಿಕೆ ಹೇರಿಕೆ ತಪ್ಪು: ಡಾ ಅನಿಲ್ ಕುಮಾರ್

Prasthutha|

ಕೆಯುಡಬ್ಲ್ಯುಜೆ ಸಂವಾದದಲ್ಲಿ ಅಭಿಮತ

- Advertisement -

ಬೆಂಗಳೂರು: ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವುದು ಸರಿಯಲ್ಲ ಎಂದು ಖ್ಯಾತ ವೈದ್ಯ ಹಾಗೂ ಕೋವಿಡ್ ನಿಗ್ರಹ ಕಾರ್ಯದಿಂದ ರಾಷ್ಟ್ರದ ಗಮನ ಸೆಳೆದ ಡಾ ಅನಿಲ್ ಕುಮಾರ್ ಅವುಲಪ್ಪ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಕೋವಿಡ್ ಸಂದರ್ಭದಲ್ಲಿ ಹಮ್ಮಿಕೊಂಡಿರುವ ವೈದ್ಯ ತಜ್ಞರ ಜೊತೆಗಿನ ಸಂವಾದ ಮಾಲೆಯಲ್ಲಿ ಕೋವಿಡ್ ಮೂರನೇ ಅಲೆಯ ಆತಂಕದ ಬಗ್ಗೆ ಅವರು ಶನಿವಾರ ಮಾತನಾಡಿದರು.

- Advertisement -

ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಸಂವಾದ ನಡೆಸಿಕೊಟ್ಟರು.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಪ್ರಕೃತಿ ಸಹಜವಾಗಿಯೇ ಹೆಚ್ಚಿರುತ್ತದೆ. ಮಕ್ಕಳಿಗೆ ಲಸಿಕೆ ಹಾಕುವುದನ್ನು ಸರ್ವೋಚ್ಚ ನ್ಯಾಯಾಲಯ ಸಹಾ ಕಡ್ಡಾಯ ಮಾಡಿಲ್ಲ. ಪೋಷಕರೇ ಈ ಬಗ್ಗೆ ನಿರ್ಧರಿಸಲು ಅನುಮತಿ ನೀಡಿದೆ. ಹೀಗಿರುವಾಗ ರಾಜ್ಯದ ಎಲ್ಲೆಡೆ ಶಾಲೆಗಳು ಲಸಿಕೆಯನ್ನು ಕಡ್ಡಾಯವಾಗಿ ಹೇರುತ್ತಿರುವುದು ತಪ್ಪು ಎಂದು ಅಭಿಪ್ರಾಯಪಟ್ಟರು.

ಮೂರನೆಯ ಅಲೆಯನ್ನು ಎದುರಿಸಲು ಬೂಸ್ಟರ್ ಡೋಸ್ ಅಗತ್ಯವೆಂದು ಮಾಡಿರುವ ಪ್ರಚಾರದ ಬಗ್ಗೆ ಮಾತನಾಡಿದ ಅವರು ಬೂಸ್ಟರ್ ಡೋಸ್ ಕಡ್ಡಾಯವೇನಲ್ಲ ಎಂದರು. 

ಕೋವಿಡ್ ಮೂರನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಬೇಡ. ಆದರೆ ಆ ಬಗ್ಗೆ ಅತಿ ಆತಂಕವೂ ಬೇಡ. ಅತಿ ಆತಂಕದಿಂದಾಗಿಯೇ ಹಲವರು  ಸಾವನ್ನಪ್ಪಿದ್ದಾರೆ. ನಮ್ಮ ಆರೋಗ್ಯ ಸರಿಯಾಗಿಟ್ಟುಕೊಂಡರೆ ಇಂತಹ ಸಾಂಕ್ರಾಮಿಕ ಕಾಯಿಲೆಗಳ ಹಾವಳಿ ಕಡಿಮೆ.

ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಪದ್ಧತಿ ಹಾಗೂ ಒಳ್ಳೆಯ ನಿದ್ದೆ ಅಗತ್ಯ. ಇವು ದೇಹವನ್ನು ಸಧೃಡವಾಗಿಸುತ್ತದೆ. ದೇಸಿ ಆಹಾರ ಪದ್ಧತಿ ಕೂಡಾ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತಿ ಮುಖ್ಯ

ದೇಶದಲ್ಲಿ ಶೇ 85 ರಷ್ಟು ಮಂದಿಗೆ ಈಗಾಗಲೇ ಕೋವಿಡ್ ಬಂದು ಹೋಗಿರುವ ಸಾಧ್ಯತೆಯೇ ಹೆಚ್ಚಿದೆ. ಹಾಗಿದ್ದಲ್ಲಿ ಅವರು ಸಹಜವಾಗಿ ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ  ಈ ಕಾರಣದಿಂದ ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಒಳ್ಳೆಯದು. ಆಗ ಕೋವಿಡ್ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಇದಕ್ಕೆ ಸಹಕಾರ ಅಗತ್ಯ. ಕೋವಿಡ್ ಬಂಡ ತಕ್ಷಣ ಭಯ ಆತಂಕ ಬಿಡಬೇಕು ಸದೃಢ ಮನಸ್ಸನ್ನು ಇಟ್ಟುಕೊಳ್ಳಬೇಕು. ನಮ್ಮ ಆರೋಗ್ಯದ ವಿಚಾರದಲ್ಲಿ ನಾವೇ ಮೊದಲ ವೈದ್ಯರು ಎಂದರು.

ಮಾಧ್ಯಮದವರದ್ದು ಧಾವಂತದ ಬದುಕು. ಆದರೆ ಕೋವಿಡ್ ಅನ್ನು ನಿರ್ಲಕ್ಷ್ಯ ಮಾಡಿಕೊಂಡು ಓಡಾಡಬಾರದು. ಅಷ್ಟೇ ಅಲ್ಲದೆ ತಾವೇ ಔಷಧಿ ಮಾಡಿಕೊಳ್ಳುವ ಕ್ರಮವನ್ನೂ ಕೈಬಿಡಬೇಕು ಎಂದು ಮಾಧ್ಯಮದವರಿಗೆ ಕಿವಿಮಾತು ಹೇಳಿದರು.

ಮೂರನೆಯ ಅಲೆ ಪ್ರಾಣಾಪಕಾರಿಯಾಗಿ ಪರಿವರ್ತನೆಯಾಗಿಲ್ಲ. ಎರಡನೆಯ ಅಲೆಯಂತಹ ಆತಂಕ ಇದರಲ್ಲಿ ಕಾಣಿಸಿಲ್ಲ. ಮೂರನೆಯ ಅಲೆ ಅತಿ ವೇಗವಾಗಿ ಹರಡುವ ಗುಣ ಹೊಂದಿದೆ. ಆದರೆ ಪ್ರಾಣಕ್ಕೆ ಕುತ್ತು ತರುವುದಿಲ್ಲ. ಸಾಂಕ್ರಾಮಿಕ ರೋಗಗಳು  ಹೊಸ ರೂಪ ಪಡೆಯುತ್ತಾ ಹೋಗುತ್ತದೆ ಆದರೆ ಕ್ರಮೇಣ ಅದರ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ ಎಂದರು. 

ಐ ಎಫ್ ಡಬ್ಲ್ಯು ಜೆ ಅಧ್ಯಕ್ಷ  ಬಿ ವಿ ಮಲ್ಲಿಕಾರ್ಜುನಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮತ್ತೀಕೆರೆ ಜಯರಾಂ, ಪುಂಡಲೀಕ ಭೀ ಬಾಳೋಜಿ, ಜಿ ಸಿ ಲೋಕೇಶ್, ಸಂಜೀವ ರಾವ್ ಕುಲಕರ್ಣಿ, ಮಲ್ಲಿಕಾರ್ಜುನ್, ಸೋಮಶೇಖರ ಗಾಂಧಿ, ಮಂಡಿಬೆಲೆ ರಾಜಣ್ಣ, ಚಿತ್ರದುರ್ಗದ ದಿನೇಶ್ ಗೌಡಗೆರೆ, ಕೊಪ್ಪಳದ ಸಿರಾಜ್ ಬಿಸರಳ್ಳಿ, ಶಿರಸಿ ಯಲ್ಲಾಪುರದ ಪ್ರಭಾ ಜಯರಾಜ್, ಚಾಮರಾಜನಗರದ ಬನಶಂಕರ ಆರಾಧ್ಯ, ಚನ್ನರಾಯಪಟ್ಟಣದ ಎ ಎಲ್  ನಾಗೇಶ್,  ದೇವರಾಜ್, ವಿಜಯಪುರದ ಸುಚಿಂದ್ರ ಲಂಬೂ, ರಾಜ್ಯ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಆಕಾಶವಾಣಿಯ ನಿರ್ದೇಶಕಿ ನಿರ್ಮಲಾ  ಯಲಿಗಾರ, ಪರಿಸರಪ್ರೇಮಿ ಬಳ್ಳೂರು ಉಮೇಶ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.

Join Whatsapp