2022 ರ ಆಸ್ಕರ್ ರೇಸ್ ನಲ್ಲಿ ಭಾರತದ ಮರಕ್ಕರ್ ಮತ್ತು ಜೈ ಭೀಮ್ ಸಿನಿಮಾ!

Prasthutha|

ತಮಿಳು ನಟ ಸೂರ್ಯ ನಟನೆಯ ‘ಜೈ ಭೀಮ್’ ಚಿತ್ರ ದೇಶದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ 2021ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. ಇನ್ನು, ಮೋಹನ್ ಲಾಲ್ ಅಭಿನಯದ ‘ಮರಕ್ಕರ್’ ಸಿನಿಮಾ ಕಳೆದ ವರ್ಷ ತೆರೆಗೆ ಬಂದು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಇವೆರಡೂ ಸಿನಿಮಾಗಳು ಈಗ 2022ರ ಆಸ್ಕರ್ ರೇಸ್ ನಲ್ಲಿದೆ. ಈ ಬಾರಿಯಾದರೂ ಭಾರತೀಯ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಲಿದೆಯಾ ಎಂಬುದು ಕುತೂಹಲ ಕೆರಳಿಸಿದೆ.

- Advertisement -

ಆಸ್ಕರ್ ಅವಾರ್ಡ್ಸ್ ನೀಡುವ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ ಈ ಬಾರಿ ಆಸ್ಕರ್ ರೇಸ್ ನಲ್ಲಿರುವ 276 ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ತಮಿಳಿನ ‘ಜೈ ಭೀಮ್’ ಹಾಗೂ ಮಲಯಾಳಂನ ‘ಮರಕ್ಕರ್’ ಸ್ಥಾನ ಪಡೆದುಕೊಂಡಿದೆ. ಕೇರಳದಲ್ಲಿ 16 ನೇ ಶತಮಾನದಲ್ಲಿ ನಡೆದ ಘಟನೆಯ ಈ ಚಲನಚಿತ್ರವು ಸ್ವಾತಂತ್ರ್ಯ ಹೋರಾಟಗಾರ ಕುಂಜಾಲಿ ಮರಕ್ಕರ್ ಅವರ ಜೀವನವನ್ನು ಆಧರಿಸಿದೆ. ಈ ಬಾರಿ 94ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮ ಮಾರ್ಚ್ 27ರಂದು ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿದೆ.

ಜೈ ಭೀಮ್’ ಆಸ್ಕರ್ ರೇಸ್ ನಲ್ಲಿ ಇರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದೆ. ಇನ್ನು, ‘ಮರಕ್ಕರ್’ ಚಿತ್ರ ತಂಡ ಕೂಡ ಈ ಬಗ್ಗೆ ಸಂತಸ ಹೊರಹಾಕಿದೆ. ಈ ಸಿನಿಮಾಗಳು ಫಿನಾಲೆ ತಲುಪಿ ಪ್ರಶಸ್ತಿ ಬಾಚಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Join Whatsapp