ಕೋವಿಡ್ ಲಸಿಕೆ ಪಡೆದವರು ಎರಡು ವರ್ಷಗಳಲ್ಲಿ ಮರಣ ಹೊಂದುತ್ತಾರೆ ! ವಾಟ್ಸಪ್ ವೈರಲ್ ಪೋಸ್ಟ್ ನ ಸತ್ಯಾಸತ್ಯತೆಗಳೇನು?

Prasthutha: May 26, 2021

►ವಿವಾದಾತ್ಮಕ ಸಂದರ್ಶನ ನೀಡಿದ ವೈರಾಲಜಿಸ್ಟ್ ಲೂಕ್ ಮೊಂಟಾಗ್ನಿಯರ್ ಯಾರು?

ಕೋವಿಡ್ ಲಸಿಕೆ ಪಡೆದ ಯಾರೊಬ್ಬರೂ ಎರಡು ವರ್ಷಗಳ ಬಳಿಕ ಬದುಕುಳಿಯಲಾರರು ಎಂದು ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಲೂಕ್ ಮೊಂಟಾಗ್ನಿಯರ್ ಅವರು ಹೇಳಿದ್ದಾರೆನ್ನಲಾದ ವಾಟ್ಸಪ್ ವೈರಲ್ ಪೋಸ್ಟ್ ಒಂದು ನಿನ್ನೆ ಭಾರೀ ವೈರಲ್ ಆಗಿತ್ತು. ಆ ಹೇಳಿಕೆಯ ಜೊತೆಗೆ ಒಂದು ವೆಬ್ ಸೈಟಿನ ಮತ್ತು ಲೂಕ್ ಅವರ ವಿಕಿಪೀಡಿಯಾ ಪೇಜಿನ ಲಿಂಕನ್ನು ಕೂಡಾ ಶೇರ್ ಮಾಡಲಾಗಿತ್ತು.

ಸುದ್ದಿಯ ವಾಸ್ತವವೇನು?

ನೊಬೆಲ್ ಪ್ರಶಸ್ತಿಯ ಅಧಿಕೃತ ವೆಬ್ ಸೈಟ್ ಪ್ರಕಾರ, ಫ್ರೆಂಚ್ ವೈರಾಲಜಿಸ್ಟ್ ಆಗಿರುವ ಲೂಕ್ ಮೊಂಟಾಗ್ನಿಯರ್ ಅವರಿಗೆ 2008 ರಲ್ಲಿ ಹ್ಯೂಮನ್ ಇಮ್ಯುನೊಡಿಫಿಷಿಯನ್ಸಿ ವೈರಸ್ (ಎಚ್ಐವಿ) ಆವಿಷ್ಕಾರಕ್ಕೆ ನೀಡಿದ ಕೊಡುಗೆಗಾಗಿ ಪ್ರಶಸ್ತಿ ನೀಡಲಾಗಿದೆ. ಆದಾಗ್ಯೂ, ಅವರು ಹುಸಿ ವೈಜ್ಞಾನಿಕ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಈಗ ಸುದ್ದಿಯಲ್ಲಿದ್ದಾರೆ. ನೋವಲ್ ಕೊರೊನಾವೈರಸ್ ಮಾನವ ನಿರ್ಮಿತ ಮತ್ತು ಎಚ್ ಐವಿಯಿಂದ ಅನುವಂಶಿಕ ವಸ್ತುಗಳನ್ನು ಒಳಗೊಂಡಿದೆ ಎಂದು ಯಾವುದೇ ಆಧಾರಗಳಿಲ್ಲದೆ ಮೊಂಟಾಗ್ನಿಯರ್ ಅವರು ಹೇಳಿದ್ದಾರೆಂದು ಫ್ರೆಂಚ್ ಪತ್ರಿಕೆ ‘ಸೈನ್ಸ್ ಫೀಡ್ ಬ್ಯಾಕ್’ ಕಳೆದ ವರ್ಷ ವರದಿ ಮಾಡಿತ್ತು.

ಲೈಫ್ ಸೈಟ್ ನ್ಯೂಸ್ ನ ವೆಬ್ ಸೈಟ್ ಲಿಂಕ್ ನಲ್ಲಿ ಸಾಮೂಹಿಕ ಕೋವಿಡ್ ಲಸಿಕೆಯು ‘ರೂಪಾಂತರಗಳನ್ನು ಸೃಷ್ಟಿಸುತ್ತದೆ’ ಮತ್ತು  ‘ಸ್ವೀಕಾರಾರ್ಹವಲ್ಲದ ತಪ್ಪು’ ಎಂದು ಮೊಂಟಾಗ್ನಿಯರ್ ಹೇಳಿದ್ದಾರೆಂದು ಉಲ್ಲೇಖಿಸುತ್ತಿದೆಯಾದರೂ, ವಾಟ್ಸಾಪ್ ನಲ್ಲಿ ವೈರಲ್ ಆಗಿರುವಂತೆ “ಈಗ ಲಸಿಕೆ ಪಡೆದವರು ಎರಡು ವರ್ಷಗಳಲ್ಲಿ ಮರಣವನ್ನಪ್ಪುತ್ತಾರೆ, ಈಗಾಗಲೇ ಲಸಿಕೆ ಪಡೆದವರು ಬದುಕುವ ಯಾವುದೇ ಭರವಸೆ ಇಲ್ಲ ಮತ್ತು ಇದಕ್ಕೆ ಯಾವುದೇ ಸಂಭಾವ್ಯ ಚಿಕಿತ್ಸೆ ಇಲ್ಲ. ನಮ್ಮ ದೇಹಗಳನ್ನು ಭಸ್ಮ ಮಾಡಲು ನಾವು ಸಿದ್ಧರಾಗಿರಬೇಕು” ಎಂಬ ಉಲ್ಲೇಖಗಳು ಅದರಲ್ಲಿಲ್ಲ. ಈ ಲೇಖನವನ್ನು ಮೇ19ರಂದು ಪ್ರಕಟಿಸಲಾಗಿದೆ.

ಲೈಫ್ ಸೈಟ್ ನ್ಯೂಸ್ ನ ಈ ಲೇಖನವು ಮೇ 18 ರಂದು ಅಮೆರಿಕಾ ಮೂಲದ ಎನ್ ಜಿಒ RAIR ಫೌಂಡೇಶನ್ ಪ್ರಕಟಿಸಿರುವ ಲೇಖನವನ್ನು ಆಧರಿಸಿಯಾಗಿದೆ. ಈ ಲೇಖನವು ಮೊಂಟಾಗ್ನಿಯರ್ ಅವರ ಸಂದರ್ಶನದ ಎರಡು ನಿಮಿಷಗಳ ಕ್ಲಿಪ್ ಅನ್ನು ಮಾತ್ರ ಒಳಗೊಂಡಿದೆ. ಈ ಸಂದರ್ಶನದ ಪೂರ್ಣ 11 ನಿಮಿಷಗಳ ಆವೃತ್ತಿಯನ್ನು ಫ್ರೆಂಚ್ ವೆಬ್ ಸೈಟ್ ಪ್ಲಾನೆಟ್ 360 ಗೆ ಅಪ್ ಲೋಡ್ ಮಾಡಲಾಗಿದೆ. ಲಸಿಕೆಗಳಿಂದಾಗಿ ಹೊಸ ಕೋವಿಡ್ ರೂಪಾಂತರಗಳು ಸೃಷ್ಟಿಯಾಗಿದೆ ಎನ್ನುವುದು ಮೊಂಟಾಗ್ನಿಯರ್ ಅವರ ವಾದವಾಗಿದೆ. ಆದರೆ ಅದಕ್ಕೆ ಅವರು ಯಾವುದೇ ಪುರಾವೆ ನೀಡಿಲ್ಲ. ಎರಡು ನಿಮಿಷಗಳ ಕ್ಲಿಪ್ ನಲ್ಲಿ, ಸಂದರ್ಶನದಲ್ಲಿ ಅವರೊಂದಿಗೆ, “ಸಾಮೂಹಿಕ ಲಸಿಕೆ ಕಾರ್ಯಕ್ರಮವನ್ನು ನೀವು ಹೇಗೆ ನೋಡುತ್ತೀರಿ? ಕೆಲಸ ಮಾಡುವ ಚಿಕಿತ್ಸೆಗಳಿಗೆ ಹೋಲಿಸಿದರೆ ಸಾಮೂಹಿಕ ಲಸಿಕೆ ದುಬಾರಿಯಲ್ಲವೇ? ಎಂದು ಅವರಲ್ಲಿ ಕೇಳಲಾಯಿತು. ಇದಕ್ಕೆ ಮೊಂಟಾಗ್ನಿಯರ್, “ಇದು ಅಗಾಧವಾದ ತಪ್ಪು, ಅಲ್ಲವೇ? ವೈಜ್ಞಾನಿಕ ದೋಷ ಮತ್ತು ವೈದ್ಯಕೀಯ ದೋಷ. ಇದು ಸ್ವೀಕಾರಾರ್ಹವಲ್ಲದ ತಪ್ಪು. ಇತಿಹಾಸ ಪುಸ್ತಕಗಳು ಅದನ್ನು ತೋರಿಸುತ್ತವೆ. ಏಕೆಂದರೆ ಲಸಿಕೆಯು ರೂಪಾಂತರಗಳನ್ನು ಸೃಷ್ಟಿಸುತ್ತಿದೆ” ಎಂದುತ್ತರಿಸಿದ್ದಾರೆ.  [ಬೋಲ್ಡ್ ನಲ್ಲಿರುವುದನ್ನು ವಾಟ್ಸಪ್ ಸಂದೇಶದಲ್ಲಿ ಸೇರಿಸಿ ವೈರಲ್ ಮಾಡಲಾಗಿತ್ತು.]

ಲೂಕ್ ಮೊಂಟಾಗ್ನಿಯರ್ ಎಲ್ಲೂ ಲಸಿಕೆ ಪಡೆದವರು ಎರಡು ವರ್ಷಗಳಲ್ಲಿ ಸಾಯುತ್ತಾರೆಂದು ಹೇಳಲೇ ಇಲ್ಲ. ಆದರೆ ಮೊಂಟಾಗ್ನಿಯರ್ ಲಸಿಕಾ ವಿರೋಧಿಯಾಗಿದ್ದರು ಎನ್ನುವುದು ವಾಸ್ತವವಾಗಿದೆ. ಅವರ ಹಳೆಯ ಸಂದರ್ಶನದ ಹೇಳಿಕೆಗಳ ಆಯ್ದ ಕ್ಲಿಪ್ ಗಳನ್ನು ಬಳಸಿಕೊಂಡು ಯಾರೋ ಕೆಲವರು ಅದಕ್ಕೆ ತಪ್ಪು ಸಂದೇಶಗಳನ್ನು ಕೊಡುವ ಮತ್ತು ಜನರನ್ನು ಭಯಗೊಳಿಸುವ ಸಂದೇಶಗಳನ್ನು ಸೇರಿಸಿದ್ದಾರೆ ಎನ್ನುವುದು ವೈರಲ್ ಸುದ್ದಿಯ ವಾಸ್ತವವಾಗಿದೆ. ಅಸ್ಸಾಂ ಪೊಲೀಸ್ ಕೂಡಾ ಈ ವೈರಲ್ ಸುದ್ದಿಯ ವಿರುದ್ಧ ಫೇಸ್ಬುಕ್ ಪೋಸ್ಟ್ ಮಾಡಿದೆ. ಹಲವು ಫ್ಯಾಕ್ಟ್ ಚೆಕ್ ಸಂಸ್ಥೆಗಳು ಕೂಡಾ ಇದೊಂದು ನಕಲಿ ಮತ್ತು ಸುಳ್ಳು ಸುದ್ದಿ ಎಂದು ಪ್ರಾಮಾಣೀಕರಿಸಿದೆ.

ಅಸ್ಸಾಂ ಪೊಲೀಸ್ ಫೇಸ್ಬುಕ್ ಪೋಸ್ಟ್

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!