ಭಾರತವೀಗ ಚುನಾಯಿತ ನಿರಂಕುಶಾಧಿಪತ್ಯ: ವಿ-ಡೆಮ್ ಸಂಶೋಧನಾ ಸಂಸ್ಥೆಯ ವರದಿ

Prasthutha|

ಹೊಸದಿಲ್ಲಿ: ಭಾರತದ ಪ್ರಜಾಪ್ರಭುತ್ವವು ಈಗ ‘ಚುನಾಯಿತ ನಿರಂಕುಶಾಧಿಪತ್ಯ’ದ ಸ್ಥಿತಿಗೆ ಇಳಿದಿದೆ ಎಂದು ಸ್ವೀಡನ್‌ನ ಗೋಥೆನ್‌ಬರ್ಗ್ ವಿವಿಯ ವಿ-ಡೆಮ್(ವೆರೈಟೀಸ್ ಆಫ್ ಡೆಮಾಕ್ರಸಿ) ಇನ್‌ಸ್ಟಿಟ್ಯೂಟ್ ವರದಿ ಮಾಡಿದೆ.

- Advertisement -

ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಧಾರ್ಮಿಕ ಸ್ವಾತಂತ್ರ್ಯದ ದಮನವನ್ನು ಮುಂದುವರಿಸಿದ್ದು, ಕಳೆದೊಂದು ದಶಕದಲ್ಲಿ ಭಾರತವು ವಿಶ್ವದ ಅತ್ಯಂತ ಕೆಟ್ಟ ನಿರಂಕುಶ ಪ್ರಭುತ್ವಗಳಲ್ಲಿ ಒಂದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿದ್ದ ಭಾರತವು ಈಗ ಚುನಾಯಿತ ನಿರಂಕುಶಾಧಿಪತ್ಯವಾಗಿ ಬದಲಾಗಿದೆ. ಇದರೊಂದಿಗೆ ಜಗತ್ತಿನ ಜನಸಂಖ್ಯೆಯ ಶೇ 68ರಷ್ಟು ಮಂದಿ ಚುನಾಯಿತ ನಿರಂಕುಶಾಧಿಪತ್ಯದ ಅಡಿಯಲ್ಲಿ ನೆಲೆಸುವಂತಾಗಿದೆ’ ಎಂದು ವರದಿಯು ಹೇಳಿದೆ. 

- Advertisement -

2014ರ ಸಂಸತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ನರೇಂದ್ರ ಮೋದಿ ಅವರು ಗೆಲುವಿನತ್ತ ಮುನ್ನಡೆಸಿದ ನಂತರ ಉದಾರವಾದಿ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಕುಸಿತ ಪ್ರಾರಂಭವಾಯಿತು ಎಂದು ವರದಿ ಹೇಳಿದೆ.

‘ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಭಾರತದಲ್ಲಿ ಸೆನ್ಸಾರ್‌ಶಿಪ್‌ ಬಳಕೆಯು ವಿರಳವಾಗಿತ್ತು. ಹಾಗಾಗಿ, ಈ ವಿಚಾರದಲ್ಲಿ ದೇಶಕ್ಕೆ 4ರಲ್ಲಿ 3.5 ಅಂಕಗಳು ದೊರೆಯುತ್ತಿದ್ದವು. 2020ರ ಹೊತ್ತಿಗೆ ಈ ಅಂಕವು 1.5ಕ್ಕೆ ಕುಸಿಯಿತು. ಅಂದರೆ ಸೆನ್ಸಾರ್‌ಶಿಪ್ ಪ್ರಯತ್ನಗಳು ಸರ್ವೇಸಾಮಾನ್ಯವಾಗಿವೆ. ಈ ಕಾರಣದಿಂದ ಭಾರತವು ಈಗ ಪಾಕಿಸ್ತಾನದಂತೆಯೇ ನಿರಂಕುಶಾಧಿಕಾರವಾಗಿದೆ ಮತ್ತು ನೆರೆಯ ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತ ಕೆಟ್ಟ ಸ್ಥಿತಿಯಲ್ಲಿದೆ’ ಎಂದು ವರದಿ ಅಭಿಪ್ರಾಯಪಟ್ಟಿದೆ.

ವರದಿಯ ಪ್ರಕಾರ, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಟೀಕಾಕಾರನ್ನು ಸುಮ್ಮನಿರಿಸಲು ದೇಶದ್ರೋಹ, ಮಾನಹಾನಿ ಮತ್ತು ಭಯೋತ್ಪಾದನಾ ನಿಗ್ರಹದಂತಹ ಕಾನೂನುಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ ಸಾವಿರಾರು ಪ್ರಜೆಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಆರೋಪಿಗಳಲ್ಲಿ ಹೆಚ್ಚಿನವರು ಆಡಳಿತ ಪಕ್ಷದ ಟೀಕಾಕಾರರು ಎಂದು ವರದಿ ವಿಶ್ಲೇಷಿಸಿದೆ.

Join Whatsapp