2022 ರ ಯುಪಿ ವಿಧಾನಸಭಾ ಚುನಾವಣೆ | ಮುಸ್ಲಿಮ್ ಮತದಾರದ ಓಲೈಕೆಗೆ ಮುಂದಾದ ಬಿಜೆಪಿ

Prasthutha|

ನವದೆಹಲಿ: 2022 ರಲ್ಲಿ ನಡೆಯುವ ಉತ್ತರಪ್ರದೇಶ ವಿಧಾನಸಭಾ ಚನಾವಣೆಗೆ ಮೊದಲು ಮುಸ್ಲಿಮ್ ಜನಸಂಖ್ಯೆಯನ್ನು ಓಲೈಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಲ್ಪಸಂಖ್ಯಾತ ಸಮುದಾಯದ 3 ಕೋಟಿ ಮತದಾರರನ್ನು ತಲುಪಲು ಮಾರ್ಗಸೂಚಿಯನ್ನು ಸಿದ್ದಪಡಿಸಿದೆ. ರಾಜ್ಯದಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 5,000 ಮುಸ್ಲಿಂ ಮತದಾರರನ್ನು ತಲುಪುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಕಾರ್ಯಕರ್ತರು ಮುಸ್ಲಿಂ ಮತದಾರರ ಬಳಿಗೆ ತೆರಳಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

- Advertisement -

ಮೂಲಗಳ ಪ್ರಕಾರ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ನಡೆಯುವ ಅಭಿಯಾನದ ಭಾಗವಾಗಿ ಸುಮಾರು 20 ಶೇಕಡಾ ಜನಸಂಖ್ಯೆಯ ಮುಸ್ಲಿಮರಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸುವ ಜವಾಬ್ದಾರಿಯನ್ನು ವಹಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಬಿಜೆಪಿ ಕ್ಷೇತ್ರವಾರು ಲೆಕ್ಕದಲ್ಲಿ ಸುಮಾರು 5 ಸಾವಿರ ಮತಗಳ ಅಂತರದಲ್ಲಿ  ಜಯಗಳಿಸಲು ಯೋಜನೆ ರೂಪಿಸಿದೆ. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಬಿಜೆಪಿ ಕೇಂದ್ರ ನಾಯಕರು ಇಬ್ಬರು ಉಸ್ತುವಾರಿಗಳನ್ನು ನೇಮಿಸಿದೆ. ಈ ನಿಟ್ಟಿನಲ್ಲಿ ಪ್ರತಿ ಅಸೆಂಬ್ಲಿ ಸ್ಥಾನದಲ್ಲಿ 50 ಕಾರ್ಯಕರ್ತರಿಗೆ ಜವಬ್ದಾರಿಯನ್ನು ನೀಡಿದೆ ಮತ್ತು ಒಬ್ಬ ಕಾರ್ಯಕರ್ತ ತನ್ನ ಪ್ರದೇಶದ 100 ಮತದಾರರನ್ನು ತಲುಪುವಂತೆ ಯೋಜನೆ ಹಮ್ಮಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ಸಮಾಜದ ಶಿಕ್ಷಕರು, ಪ್ರಾಧ್ಯಾಪಕರು, ವೈದ್ಯರು, ಇತಿಹಾಸಕಾರರು, ಎಂಜಿನಿಯರ್‌ಗಳು ಮತ್ತು ಕಲಾವಿದರಂತಹ ಬುದ್ದಿಜೀವಿಗಳನ್ನು ಕೇಂದ್ರೀಕರಿಸಿ ಮತಭೇಟೆಯಲ್ಲಿ ಬಿಜೆಪಿ ನಿರತವಾಗಿದೆ.

ಮಾತ್ರವಲ್ಲದೆ ಈ ಅಭಿಯಾನದ ಭಾಗವಾಗಿ ಹಿಂದುಳಿದ ಪ್ರದೇಶದ ಮುಸ್ಲಿಮರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಅವರಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ, ಆವಾಸ್ ಯೋಜನೆ, ಆಯುಷ್ಮಾನ್ ಯೋಜನೆ ಮತ್ತು ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳನ್ನು ವಿವರಿಸುವ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಉತ್ತರ ಪ್ರದೇಶದ 145 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕರಾಗಿದ್ದಾರೆ. ಮುಸ್ಲಿಮ್ ಬಾಹುಳ್ಯದ ಶೇಕಡಾ 20 ರಿಂದ 60 ರಷ್ಟಿರುವ 70 ಅಸೆಂಬ್ಲಿ ಸೀಟುಗಳಿವೆ. ಈ ಅಸೆಂಬ್ಲಿ ಸ್ಥಾನಗಳಲ್ಲಿ ಹೆಚ್ಚಿನವು ಪಶ್ಚಿಮ ಉತ್ತರ ಪ್ರದೇಶ, ಪೂರ್ವ ಉತ್ತರ ಪ್ರದೇಶ ಮತ್ತು ನದಿ ತೀರದ ಪ್ರದೇಶಗಳಲ್ಲಿವೆ. ಮುಸ್ಲಿಂ ಮತದಾರರಲ್ಲದೆ ಬಿಜೆಪಿ ಕಾರ್ಯಕರ್ತರು ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ಮತಭೇಟೆ ನಡೆಸಿದೆ.

- Advertisement -

ಮುಂದಿನ ವರ್ಷ ಆರಂಭದಲ್ಲಿ ಯುಪಿ ಅಸೆಂಬ್ಲಿಗೆ ಚುನಾವಣೆ ನಡೆಯಲಿದೆ. 2017 ರ ಚುನಾವಣೆಯಲ್ಲಿ 403 ಅಸೆಂಬ್ಲಿ ಸೀಟುಗಳ ಪೈಕಿ ಬಿಜೆಪಿ 325 ಸ್ಥಾನಗಳನ್ನು ಗೆದ್ದಿತ್ತು. ಅದೇ ರೀತಿಯಲ್ಲಿ ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳು 54 ಸೀಟುಗಳನ್ನು ಪಡೆದಿತ್ತು. ಬಿಎಸ್ಪಿ ಕೇವಲ 19 ಮತ್ತು ಇತರೆ 5 ಸೀಟು ಪಡೆದಿತ್ತು

Join Whatsapp