ಆಗಸ್ಟ್ ತಿಂಗಳೊಂದರಲ್ಲೇ ಮುಸ್ಲಿಮರ ಮೇಲಿನ ನಡೆದ ದೌರ್ಜನ್ಯಗಳೆಷ್ಟು ? ಆತಂಕ ಮೂಡಿಸುತ್ತಿದೆ ಅಂಕಿ ಅಂಶಗಳು !

Prasthutha|

ಹೈದರಾಬಾದ್: ಆಗಸ್ಟ್ ತಿಂಗಳು ಭಾರತದಲ್ಲಿ ಮುಸ್ಲಿಮ್ ವಿರೋಧಿ ದ್ವೇಷ ಕೃತ್ಯಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ವಿಶೇಷವಾಗಿ ಹಿಂದಿ ಭಾಷಿಕ ವಲಯದಲ್ಲಿ ಹಲವಾರು ಘಟನೆಗಳು ನಡೆದಿದೆ. ಅವುಗಳನ್ನು ಈ ಕೆಳಗೆ ಪಟ್ಟಿಮಾಡಲಾಗಿದೆ.

ಬಲಪಂಥೀಯ ಹಿಂದುತ್ವ ಗುಂಪುಗಳ ಸದಸ್ಯರು ಬಿಜೆಪಿ ನಾಯಕರೊಂದಿಗೆ ಸೇರಿಕೊಂಡು ಆಗಸ್ಟ್ 8 ರಂದು ದೆಹಲಿ ಜಂತರ್ ಮಂತರ್ ನಲ್ಲಿ ಬೃಹತ್ ಜಾಥ ನಡೆಸಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಘೋಷಣೆ ಕೂಗಿ ಮುಸ್ಲಿಮರನ್ನು ವಂಶಹತ್ಯೆ ನಡೆಸಲು ತನ್ನ ಕಾರ್ಯಕರ್ತರಿಗೆ ಕರೆ ನೀಡಿತ್ತು. ಮಾತ್ರವಲ್ಲದೆ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಿದೆ.

- Advertisement -

ಆಗಸ್ಟ್ 11 ರಂದು ಕ್ರಾಂತಿ ಸೇನೆ ಸಂಘಟನೆಯು ಯುಪಿಯ ಮುಝಫ್ಫರ್ ನಗರದಲ್ಲಿ ಮುಸ್ಲಿಮ್ ಮೆಹಂದಿ ವಿನ್ಯಾಸಗಾರರನ್ನು ಕೆಲಸಕ್ಕೆ ನೇಮಿಸದಂತೆ ಹಿಂದೂ ಮಳಿಗೆ ಮಾಲಕರಿಗೆ ಒತ್ತಡ ಹೇರಿತ್ತು. ಅದೇ ದಿನ ಕಾನ್ಪುರದಲ್ಲಿ ಆಟೋ ಚಾಲಕ ಅಸ್ಫರ್ ಅಹ್ಮದ್ ಎಂಬಾತನ ಮೇಲೆ ಆತನ ಮಗಳ ಸಮ್ಮುಖದಲ್ಲೇ ಗಂಭೀರವಾಗಿ ಹಲ್ಲೆ ನಡೆಸಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತ ಪಡಿಸಿತ್ತು.

ಆಗಸ್ಟ್ 22 ರಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ಮುಸ್ಲಿಮ್ ಬಳೆ ಮಾರಾಟಗಾರನ ಮೇಲೆ ಬಲಪಂಥೀಯ ದುಷ್ಟ ಶಕ್ತಿಗಳು ಗಂಭೀರವಾಗಿ ಹಲ್ಲೆ ನಡೆಸಿದ್ದರು. ನಂತರ ಆತನ ಬಳಿಯಿದ್ದ ವಸ್ತುಗಳನ್ನು ನಾಶಪಡಿಸಿ ಆತನ ಬಳಿಯಿದ್ದ 10 ಸಾವಿರ ನಗದನ್ನು ದೋಚಿದ್ದರು. ಆಗಸ್ಟ್ 23 ರಂದು ನಡೆದ ಘಟನೆಯಲ್ಲಿ ಮಧ್ಯಪ್ರದೇಶದ ಬಾಪೌಲಿ ಹಳ್ಳಿಯಲ್ಲಿ ಇಮಾಮ್ ಒಬ್ಬರನ್ನು ಬಲಪಂಥೀಯ ಗುಂಪು ವಂದೇ ಮಾತರಂ ಪಠಿಸಲು ಬಲವಂತ ಪಡಿಸಿದೆ. ಇದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಆತನನ್ನು ಹಳ್ಳಿಯಿಂದ ಹೊರದಬ್ಬಲಾಗಿದೆ.

ಆಗಸ್ಟ್ 25 ರ ಬೆಳವಣಿಗೆಯಲ್ಲಿ ಕಳ್ಳತನದ ಆರೋಪದಲ್ಲಿ ಮುಸ್ಲಿಮ್ ಯುವಕನನ್ನು ಕೂದಲು ಹಿಡಿದು ಎಳೆದು ಥಳಿಸಿದ ಘಟನೆ ಯುಪಿಯ ರಾಯ್ ಬರೇಲಿಯಲ್ಲಿ ನಡೆದಿತ್ತು. ಅದೇ ರೀತಿ ಆಗಸ್ಟ್ 27 ರಂದು ಮಥುರಾದಲ್ಲಿ ಮುಸ್ಲಿಮ್ ದೋಸೆ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ ಆತನ ಮಳಿಗೆಯನ್ನು ಧ್ವಂಸಗೊಳಿಸಿ ದೌರ್ಜನ್ಯವೆಸಗಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಮುಸ್ಲಿಮ್ ವ್ಯಾಪಾರಿಯ ಮೇಲೆ ಆರ್ಥಿಕ ಜಿಹಾದ್ ನ ಆರೋಪದಲ್ಲಿ ಹಲ್ಲೆ ನಡೆಸಲಾಗಿತ್ತು. ಮುಂದಕ್ಕೆ ಆಗಸ್ಟ್ 29 ರಂದು ಮಧ್ಯಪ್ರದೇಶದ ಉಜ್ವಯಿನಿ ಜಿಲ್ಲೆಯ ಗ್ರಾಮದಲ್ಲಿ ಮುಸ್ಲಿಮ್ ಗುಜುರಿ ವ್ಯಾಪಾರಿಗೆ ಇಬ್ಬರು ಹಿಂದುತ್ವವಾದಿಗಳು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತಪಡಿಸಿದ್ದರು.

ಮೇಲಿನ ನಿದರ್ಶನಗಳನ್ನು ಹೊರತುಪಡಿಸಿ ಹಿಂದೂ ಜಾಗರಣ ವೇದಿಕೆ ಎಂಬ ಹಿಂದುತ್ವ ಗುಂಪು ಆಗಸ್ಟ್ 19 ರಂದು ಮಂಗಳೂರು ಸಮೀಪದ ಪುತ್ತೂರಿನಲ್ಲಿ ಹಿಂದೂ ಮಹಿಳೆ ಮತ್ತು ಮುಸ್ಲಿಮ್ ಯುವಕ ಬೆಂಗಳೂರಿಗೆ ಬಸ್ಸಿನಲ್ಲಿ ಒಟ್ಟಿಗೆ ಪ್ರಯಾಣ ನಡೆಸಿದ ಆರೋಪ ಹೊರಿಸಿ ಪೊಲೀಸ್ ಠಾಣೆಗೆ ಎಳೆದೊಯ್ದು ದೌರ್ಜನ್ಯ ನಡೆಸಿದ್ದರು. ಅದೇ ರೀತಿ ಜಾರ್ಖಂಡ್ ನ ಜಮ್ ಶೇಡ್ ಪುರದಲ್ಲಿ ಇಬ್ಬರು ಮುಸ್ಲಿಮ್ ಯುವಕರಾದ ಮುಹಮ್ಮದ್ ಔರಂಗಜೇಬ್ ಮತ್ತು ಮುಹಮ್ಮದ್ ಅರ್ಝು ಎಂಬವರಿಗೆ ಆಗಸ್ಟ್ 26 ರಂದು ಪೊಲೀಸ್ ಅಧಿಕಾರಿಗಳು ಕ್ರೂರವಾಗಿ ಥಳಿಸಿ ನಂತರ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಮೇಲಿನ ನಿದರ್ಶನಗಳಲ್ಲಿ ದಾಳಿಗೊಳಗಾದ ಪ್ರತಿಯೊಬ್ಬರೂ ಕೂಡ ಸಮಾಜದ ಕೆಳ ಆರ್ಥಿಕ ಸ್ತರದ ಹಿನ್ನೆಲೆಯುಳ್ಳವರಾಗಿದ್ದಾರೆ ಎಂಬುದು ವಿಶೇಷವಾಗಿದೆ.

- Advertisement -