ಉತ್ತರ ಪ್ರದೇಶದ ಜನಸಂಖ್ಯೆ ನಿಯಂತ್ರಣ ಮಸೂದೆ ಸಂವಿಧಾನ ವಿರೋಧಿ: ವೆಲ್ಫೇರ್ ಪಾರ್ಟಿ

Prasthutha|

ಬೆಂಗಳೂರು: ಉತ್ತರ ಪ್ರದೇಶ ಜನಸಂಖ್ಯೆ ನಿಯಂತ್ರಣ ಮಸೂದೆ ಸಂವಿಧಾನ ವಿರೋಧಿಯಾಗಿದ್ದು, ಯೋಗಿ ಸರ್ಕಾರ ದುರುದ್ದೇಶದಿಂದ ಈ ಕಾಯ್ದೆ ಜಾರಿಗೆ ತರಲು ಮುಂದಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್. ಕ್ಯೂ. ಆರ್. ಇಲ್ಯಾಸ್, ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ 2021ರಡಿ ಎರಡು ಮಕ್ಕಳ ನೀತಿ ಜಾರಿಗೆ ಸರ್ಕಾರ ಮುಂದಾಗಿದೆ. ಅದರ ಉಲ್ಲಂಘನೆ ಮಾಡಿದವರಿಗೆ ಸರ್ಕಾರಿ ಸೌಲಭ್ಯ ಮತ್ತು ಸಂವಿಧಾನದ ಹಕ್ಕುಗಳನ್ನು ನಿರಾಕರಿಸಲು ನಿರ್ಧರಿಸಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವುದು, ಸರ್ಕಾರಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವುದರಿಂದ ತಡೆಯುವುದು, ಸರ್ಕಾರದ ಯಾವುದೇ ಸೌಲಭ್ಯ ಸಿಗದಂತೆ ಮಾಡಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

- Advertisement -

ಜನಸಂಖ್ಯೆ ಸೀಮಿತ ಪರಿಸರ ಮತ್ತು ಆರ್ಥಿಕ ಸಂಪನ್ಮೂಲಕ್ಕಾಗಿ ಭಾರ ಎಂಬ ವಾದವನ್ನು ಅಲ್ಲಗೆಳೆದಿರುವ ಅವರು, ಮಾನವ ಸಂಪನ್ಮೂಲ ಯಾವುದೇ ದೇಶದ ಅಮೂಲ್ಯ ಸಂಪತ್ತು ಹಾಗೂ ಬೇಡಿಕೆಗಳನ್ನು ಪೂರೈಸಲು ನಮ್ಮ ದೇಶದಲ್ಲಿ ಸಂಪನ್ಮೂಲಗಳ ಯಾವುದೇ ಕೊರತೆ ಇಲ್ಲ. ಆದರೆ ಸಮಾನ ಹಂಚಿಕೆಯಲ್ಲಿ ತೊಂದರೆ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಯುಪಿಯಲ್ಲಿ ಪ್ರಸ್ತಾವಿತ ಮಸೂದೆ ಸಾಂವಿಧಾನಿಕವಾಗಿ ಮತ್ತು ಕಾನೂನುಬದ್ಧವಾಗಿ ಪ್ರಶ್ನಾರ್ಹವಾಗಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸಮಸ್ಯೆ ಸೃಷ್ಟಿಸಿ ಕೋಮು ಧ್ರುವೀಕರಣ ತೀವ್ರಗೊಳಿಸುವುದು ಮತ್ತು ಸಮಾಜದಲ್ಲಿ ಪೂರ್ವಾಗ್ರಹ ಮತ್ತು ಧರ್ಮಾಂಧತೆಯನ್ನು ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ ಎಂದು ಡಾ.ಎಸ್. ಕ್ಯೂ .ಆರ್. ಇಲ್ಯಾಸ್ ತಿಳಿಸಿದ್ದಾರೆ.



Join Whatsapp