ಮಂಗಳೂರು: ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ, ಅವರ ಫೋಟೋವನ್ನು ಸ್ವಾತಂತ್ರ್ಯೋತ್ಸವದ ರಥದಲ್ಲಿ ಹಾಕಿದ್ದನ್ನು ವಿರೋಧಿಸಿ ವಾಹನ ಜಾಥಾಕ್ಕೆ ಅಡ್ಡಿಪಡಿಸಿದ್ದು ಸರಿಯಲ್ಲ ಎಂದು ಮಾಜಿ ಸಚಿವ ಯು. ಟಿ ಖಾದರ್ ಹೇಳಿದ್ದಾರೆ.
ಈ ಕುರಿತು ಅವರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸ್ವಾತಂತ್ರ್ಯೋತ್ಸವ ರಥವನ್ನು ಎಸ್ ಡಿಪಿಐ ಕಾರ್ಯಕರ್ತರು ತಡೆದಿರುವ ಘಟನೆ ದುರದೃಷ್ಟಕರ ಎಂದರು. ಕಾನೂನು ಮತ್ತು ನಿಯಮಗಳನ್ನು ಪಾಲಿಸುವುದು ಸರ್ವರ ಜವಾಬ್ದಾರಿ. ಪ್ರತಿಭಟನೆ ಮಾಡುವವರಿಗೆ ಕಾನೂನು ರೀತಿಯಲ್ಲಿ ಅವಕಾಶ ಇತ್ತು. ಅದನ್ನು ಬಿಟ್ಟು ರಥ ತಡೆದಿರುವುದು ಸರಿಯಾದ ಕ್ರಮ ಅಲ್ಲ ಎಂದು ತಿಳಿಸಿದರು.
ದೊಡ್ಡತನ ಮಾಡಲು ಹೋಗಿ ದಡ್ಡತನ ಮಾಡಿದ್ದು, ಪ್ರಚಾರಕ್ಕಾಗಿ ಮಾಡಿ ಅಪಹಾಸ್ಯವಾಗುವಂತೆ ಆಗಿದೆ. ಈ ರೀತಿಯ ದುಡುಕುತನದಿಂದ ಕಾನೂನು ಕೈಗೆತ್ತಿಕೊಂಡರೆ ಸಮುದಾಯಕ್ಕೆ, ಸಮಾಜಕ್ಕೆ ಪ್ರಯೋಜನವಾಗುವುದಿಲ್ಲ ಎಂದರು. ಕಬಕ ಗ್ರಾಮ ಪಂಚಾಯಿತಿ ಕಾನೂನು ಪ್ರಕಾರ ಕಾರ್ಯಕ್ರಮ ಮಾಡಿದೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಬ್ರಿಟಿಷರಿಗೆ ಕ್ಷಮಾಪಣೆ ಕೊಟ್ಟರು, ಗಾಂಧೀಜಿ ಹತ್ಯೆಯಲ್ಲಿ ಇವರ ಪಾತ್ರವಿದೆ ಎಂಬ ಬಗ್ಗೆ ಭಿನ್ನಾಭಿಪ್ರಾಯ ಇದೆ. ಇದನ್ನು ಜನಜಾಗೃತಿ ಮೂಲಕ ಮನವರಿಕೆ ಮಾಡಬಹುದಿತ್ತು. ಆದರೆ, ರಥ ನಿಲ್ಲಿಸಿದ್ದು, ಸರಿಯಾದ ಕ್ರಮ ಅಲ್ಲ ಎಂದು ತಿಳಿಸಿದರು.