ಕತಾರ್ ಇಂಡಿಯನ್ ಸೋಷಿಯಲ್ ಫೋರಂನಿಂದ ಭಾರತದ ಸ್ವಾತಂತ್ರ್ಯ ದಿನಾಚರಣೆ

Prasthutha|

ದೋಹ ಕತಾರ್: ಕತಾರ್ ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಾಜ್ಯ ಘಟಕದಿಂದ ಭಾರತದ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಐಕ್ಯಗೀತೆಯ ಮೂಲಕ, ಅಫ್ರಿದಿ ಮಂಗಳೂರು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

- Advertisement -


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಷನ್ (KMCA) ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸಲಹೆಗಾರ ಜನಾಬ್ ಸಾಖಿಬ್ ರಝಾ ಖಾನ್ ಮಾತನಾಡಿ, ಸ್ವಾತಂತ್ರ್ಯದ ಹೋರಾಟದಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲಾ ವರ್ಗದ ಜನರು ಭಾಗಿಯಾಗಿದ್ದರು. ಆದರೆ ಇಂದು ಜಾತಿ, ಮತ ಭೇದಗಳ ನುಸುಳುವಿಕೆಯಿಂದಾಗಿ, ಕೆಲ ವರ್ಗದ ಜನರಿಗೆ ಸಂಪೂರ್ಣ ಸ್ವಾತಂತ್ರ್ಯ ಮರೀಚಿಕೆಯಾಗಿದೆ. ಪ್ರತಿಯೊಬ್ಬರೂ ಸಂಘಟಿದರಾದಾಗ ಮಾತ್ರ, ಎಲ್ಲಾ ವರ್ಗದ ಜನರು ತಾವು ಕಳೆದುಕೊಂಡಿರುವ ಮೂಲಭೂತ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಮರಳಿ ಪಡೆಯಲು ಸಾಧ್ಯ ಎಂದು ಹೇಳಿದರು.
ಮತ್ತೊಬ್ಬ ಅತಿಥಿ, ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ನ ಅಧ್ಯಕ್ಷ ಜನಾಬ್ ರಿಝ್ವಾನ್ ಅಹ್ಮದ್ , ಕಾರ್ಪೊರೇಟರ್ ಗಳಿಗಿರುವ ಸ್ವಾತಂತ್ರ್ಯದ ಹಾಗೆಯೇ ಪ್ರತಿಯೊಬ್ಬ ಪ್ರಜೆಗೂ ಸಮಾನ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ದೇಶದ ಪ್ರಜೆಗಳು ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದು ಹೇಳಿದರು.


ಇಂಡಿಯಾ ಫ್ರೆಟರ್ನಿಟಿ ಫೋರಂ, ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅಯ್ಯೂಬ್ ಉಳ್ಳಾಲ ರವರು, ತಮ್ಮ ಸಂದೇಶ ಭಾಷಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ನಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಪೂರ್ವಜರ ಬಗ್ಗೆ ಬೆಳಕನ್ನು ಚೆಲ್ಲುತ್ತಾ, ನಮ್ಮ ಪೂರ್ವಜರು ಕಂಡಿದ್ದ ಸ್ವತಂತ್ರ ಭಾರತದ ಕನಸು ನನಸಾಗಿಯೇ ಉಳಿದಿದೆ, ಪ್ರಸ್ತುತ ಸನ್ನಿವೇಶದಲ್ಲಿ ಅನ್ಯಾಯದ ವಿರುದ್ಧ ಮಾತನಾಡುವ ಸ್ವಾತಂತ್ರ್ಯ ವನ್ನು ಪ್ರಜೆಗಳಿಂದ ಕಸಿದುಕೊಳ್ಳಲಾಗುತ್ತಿದೆ, ಇದನ್ನೆಲ್ಲಾ ಮರಳಿ ಪಡೆಯಲು, ನಾವೆಲ್ಲರೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಪ್ರಸಕ್ತ ಸನ್ನಿವೇಶದ ಬೇಡಿಕೆಯಾಗಿದೆ ಎಂದು ಹೇಳಿದರು.

- Advertisement -


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕತಾರ್ ಇಂಡಿಯನ್ ಸೋಷಿಯಲ್ ಪೋರಂ ಕರ್ನಾಟಕ ರಾಜ್ಯಾಧ್ಯಕ್ಷ ನಝೀರ್ ಪಾಷಾ ಮಾತನಾಡಿ, ಸ್ವಾತಂತ್ರ್ಯ ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಘನತೆಯಿಂದ ಜೀವಿಸುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ಕೊಟ್ಟಿದೆ. ಆದರೆ, ಕೆಲವು ಮತಾಂಧ ಶಕ್ತಿಗಳ ಷಡ್ಯಂತ್ರಗಳಿಂದ, ಜಾತಿ, ಧರ್ಮಗಳ ರಾಜಕೀಯದಿಂದ ಇಂದು ಶೋಷಿತರು, ದಮನಿತರು, ದಲಿತರು, ಅಲ್ಪಸಂಖ್ಯಾತರು ಹಾಗೂ, ಆದಿವಾಸಿಗಳು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಆದುದ್ದರಿಂದ, ಪ್ರತಿಯೊಬ್ಬರಿಗೂ ಸಮಾನವಾದ ಸ್ವಾತಂತ್ರ್ಯವನ್ನು ಮರಳಿ ಪಡೆಯಲು, ಹೋರಾಟ ಮಾಡಬೇಕಾದ ಕರ್ತವ್ಯ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯ ಪ್ರಜೆಯದಾಗಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ದಫ್ನಾ ಬ್ಲಾಕ್ ಅಧ್ಯಕ್ಷ ಖಲಂದರ್ ಜಲ್ಸೂರ್, ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಕೊಡ್ಲಿಪೇಟೆ, QISF ದೋಹಾ ಬ್ಲಾಕ್ ಅಧ್ಯಕ್ಷರಾದ ಅನ್ವರ್ ಅಂಗರಗುಂಡಿ, ಪ್ರಧಾನ ಕಾರ್ಯದರ್ಶಿಗಳಾದ ಅತೀಖ್ ಮಡಿಕೇರಿ, QISF ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ಼್ ಕಾರ್ನಾಡ್ ಉಪಸ್ಥಿತರಿದ್ದರು.


QISF ದೋಹ ಬ್ಲಾಕ್ ನ ಪ್ರಧಾನ ಕಾರ್ಯದರ್ಶಿಗಳಾದ ಅತೀಖ್ ಮಡಿಕೇರಿ ಧನ್ಯವಾದಾಗಳನ್ನು ಅರ್ಪಿಸುತ್ತಾ, ದೇಶದ ಸಂರಕ್ಷಣೆಗಾಗಿ ಪ್ರತಿ ಕ್ಷಣವೂ ಬಿಡುವಿಲ್ಲದೆ ದುಡಿಯುತ್ತಿರುವ ಯೋಧರ ಬಗ್ಗೆ ಬೆಳಕನ್ನು ಚೆಲ್ಲಿ, ಭಾರತೀಯ ಯೋಧರ ಪರಿಶ್ರಮವನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಂಗವಾಗಿ, ಉಮರ್ ಸಲಾತ್ತೊರ್ ರವರು ದೇಶಭಕ್ತಿ ಗೀತೆಯನ್ನು ಹಾಡುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಶಾಕಿರ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Join Whatsapp