ಬೆಂಗಳೂರು: ಕರ್ನಾಟಕ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕನಾಗಿ ಶಾಸಕ ಯು.ಟಿ.ಖಾದರ್ ಅವರನ್ನು ನೇಮಕಗೊಳಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.
ಈ ನೇಮಕದ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ಪಕ್ಷ ತೊರೆಯುವುದಾಗಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿರುವ ಮತ್ತೋರ್ವ ಹಿರಿಯ ನಾಯಕ ಯು.ಟಿ.ಖಾದರ್ ಅವರಿಗೆ ಈ ಹುದ್ದೆ ನೀಡಿ, ಇಬ್ರಾಹೀಂ ಅವರಿಗೆ ಟಾಂಗ್ ನೀಡಲಾಗಿದೆ. ವಿದಾನ ಪರಿಷತ್ ವಿರೋಧ ಪಕ್ಷದ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಿಎಂ ಇಬ್ರಾಹೀಂ ಆ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಪಕ್ಷ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಪಸಂಖ್ಯಾತರಿಗೆ ಸ್ಥಾನಮಾನ ನೀಡಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಯು.ಟಿ.ಖಾದರ್ ಗೆ ಮಹತ್ವದ ಸ್ಥಾನಮಾನ ನೀಡಲಾಗಿದೆ.