ಶೌಚಾಲಯದ ನೀರು ಕುಡಿಯಲು ಬಳಕೆ: 30 ವರ್ಷಗಳ ಬಳಿಕ ಆಸ್ಪತ್ರೆಯ ಯಡವಟ್ಟು ಬಹಿರಂಗ..!

Prasthutha|

ಜಪಾನ್: ಶೌಚಾಲಯಗಳಿಗೆ ಬಳಸಬೇಕಿದ್ದ ಸಂಸ್ಕರಿಸದ ನೀರನ್ನು ಆಸ್ಪತ್ರೆಯೊಂದು ಕಳೆದ 30 ವರ್ಷಗಳಿಂದ ಕುಡಿಯಲು ಬಳಸಿದ ವಿಲಕ್ಷಣ ಘಟನೆ ಜಪಾನಿನಲ್ಲಿ ನಡೆದಿದೆ. ಜಪಾನ್’ನ ಒಸಾಕಾ ವಿಶ್ವವಿದ್ಯಾಲಯ ಆವರಣದಲ್ಲಿರುವ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ವಿಷಯ ಬೆಳಕಿಗೆ ಬರುತ್ತಿದ್ದಂತೆ ಒಸಾಕಾ ವಿಶ್ವವಿದ್ಯಾಲಯದ ಸಂಶೋಧಕ ಮತ್ತು ಆಸ್ಪತ್ರೆಯ ಉಪಾಧ್ಯಕ್ಷರಾದ ಕಜುಹಿಕೊ ನಕತಾನಿ ಸಾರ್ವಜನಿಕರಲ್ಲಿ ಕ್ಷಮೆ ಕೇಳಿದ್ದಾರೆ.

- Advertisement -

ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣದ ವೇಳೆ ಶೌಚಾಲಯಕ್ಕೆ ಬಳಸಬೇಕಾಗಿದ್ದ ಅಸುರಕ್ಷಿತ ನೀರನ್ನು ಕುಡಿಯಲು ಹಾಗೂ ಕೈ ತೊಳೆಯಲು ಬಳಸುತ್ತಿರುವುದು ಗಮನಕ್ಕೆ ಬಂದಿದೆ. 1993ರಲ್ಲಿ ಆಸ್ಪತ್ರೆ ನಿರ್ಮಾಣದ ವೇಳೆ ಪೈಪುಗಳ ಜೋಡಣೆಯಲ್ಲಿ ಯಡವಟ್ಟು ಆಗಿರುವುದೇ ಸಮಸ್ಯೆಗೆ ಕಾರಣ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಆಸ್ಪತ್ರೆಯು ಒಸಾಕಾ ವಿಶ್ವವಿದ್ಯಾಲಯದಲ್ಲಿದ್ದು, ಕ್ಲಿನಿಕ್ ಕಟ್ಟಡವು ವೈದ್ಯಕೀಯ ಬೋಧಕ ವರ್ಗದ ಕೊಠಡಿಯನ್ನೂ ಒಳಗೊಂಡಿದೆ.

- Advertisement -

ಬಾವಿಯಿಂದ ತೆಗೆಯಲಾಗುವ ನೀರನ್ನು 120ಕ್ಕೂ ಹೆಚ್ಚು ಪೈಪುಗಳ ಮೂಲಕ ವಿವಿಯ ವಿವಿಧ ಕಟ್ಟಡಗಳಗೆ ಪೂರೈಸಲಾಗುತ್ತಿದೆ. ಆದರೆ ಪೈಪುಗಳ ಜೋಡಣೆಯಲ್ಲಿ ಆಗಿದ್ದ ಯಡವಟ್ಟು ಹೊಸ ಚಿಕಿತ್ಸಾ ಘಟಕದ ನಿರ್ಮಾಣ ಪ್ರಾರಂಭವಾಗುವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ ಎಂದು ಜಪಾನಿನ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಕಳೆದ 30 ವರ್ಷಗಳಿಂದ ಸಂಸ್ಕರಿಸಿದ ನೀರನ್ನು ಬಳಸುತ್ತಿದ್ದರೂ, ನೀರಿನಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಆಸ್ಪತ್ರೆಯಲ್ಲಿ ವರದಿಯಾಗಿಲ್ಲ. 2014ರಿಂದಲೂ ಪ್ರತಿ ವಾರ ನೀರಿನ ಬಣ್ಣ, ರುಚಿ ಮತ್ತು ವಾಸನೆಯನ್ನು ಪರಿಶೀಲಿಸಲಾಗುತ್ತಿದ್ದು, ಈ ಬಗ್ಗೆ ದಾಖಲೆಗಳು ಲಭ್ಯವಿದೆ. ‘ಜನಸಾಮನ್ಯರ ಆತಂಕಕ್ಕೆ ಕಾರಣವಾಗಿರುವುದಕ್ಕೆ ನನಗೆ ತುಂಬಾ ವಿಷಾದವಿದೆ’ ಎಂದು ನಕತಾನಿ ಪತ್ರಿಕಾಗೋಷ್ಠಿಯಲ್ಲಿ ಮುಕ್ತವಾಗಿ ಕ್ಷಮೆಯಾಚಿಸಿದ್ದಾರೆ

Join Whatsapp