ಶ್ವೇತಭವನ ವಶಕ್ಕೆ ಬೈಡನ್ ಚಾಲನೆ | ಸೋಲೊಪ್ಪದ ಟ್ರಂಪ್ | ಸೋಲೊಪ್ಪುವಂತೆ ಪತ್ನಿಯ ಮನವಿ

Prasthutha|

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿರುವ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್, ಶ್ವೇತಭವನ ವಶಕ್ಕೆ ಮೊದಲ ಹಂತದ ಸಿದ್ಧತೆಗಳನ್ನು ನಡೆಸಿದ್ದಾರೆ. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಸೋಲು ಒಪ್ಪಿಕೊಂಡಿಲ್ಲ, ಚುನಾವಣೆ ಮೇಲಿನ ತಮ್ಮ ಸಂಶಯ ಮುಂದುವರಿಸಿದ್ದಾರೆ.

ವಿಜಯದ ಸಂಭ್ರಮದಲ್ಲಿ ತೇಲಿದ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಗೆ ಜಾಗತಿಕ ನಾಯಕರ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಡೆಲವೇರ್ ವಿಲ್ಮಿಂಗ್ಟನ್ ನಲ್ಲಿ ಸೋಮವಾರ ಜಂಟಿ ಭಾಷಣ ಮಾಡಲಿದ್ದೇವೆ ಎಂದು ಬೈಡನ್ ಮತ್ತು ಕಮಲಾ ಘೋಷಿಸಿದ್ದಾರೆ.

- Advertisement -

ಕೋವಿಡ್ 19 ನಿಯಂತ್ರಣ ಮತ್ತು ಆರ್ಥಿಕ ಪುನಶ್ಚೇತನ ಕುರಿತು ಬೈಡನ್ ಮತ್ತು ಕಮಲಾ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಸೋಲೊಪ್ಪಲು ಮೆಲಾನಿಯಾ ಮನವಿ : ಚುನಾವಣೆ ಸೋತಿದ್ದರೂ, ಸೋಲೊಪ್ಪಲು ಸಿದ್ಧವಿಲ್ಲದ ಅಧ್ಯಕ್ಷ ಟ್ರಂಪ್ ಗೆ ಅವರ ಆಪ್ತ ವಲಯದಲ್ಲಿ ಸೋಲೊಪ್ಪಲು ಒತ್ತಡ ಬರುತ್ತಿದೆ ಎನ್ನಲಾಗುತ್ತಿದೆ. ಅವರಲ್ಲಿ ಟ್ರಂಪ್ ಪತ್ನಿ ಕೂಡ, ಸೋಲೊಪ್ಪಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮೆಲಾನಿಯಾ ಬಹಿರಂಗ ಹೇಳಿಕೆ ನೀಡಿಲ್ಲವಾದರೂ, ಆಂತರಿಕ ವಲಯದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಶ್ವೇತಭವನದಿಂದ ಗೌರವಯುತವಾಗಿ ತೆರಳುವ ಇಚ್ಛೆ ಅವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.  

- Advertisement -