ಕಲ್ಲು ಗಣಿಗಾರಿಕೆ ನಿಯಮಾವಳಿ ಸರಳೀಕರಣಕ್ಕೆ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಕಲ್ಲುಗಣಿ ಗಣಿಗಾರಿಕೆ ನಿಯಮಾವಳಿಗಳು ಜಟಿಲವಾಗಿದ್ದು, ಇದನ್ನು ಸರಳೀಕರಣಗೊಳಿಸುವ ಜೊತೆಗೆ ಸಮಸ್ಯೆಗಳ ನಿವಾರಣೆ ಕ್ರಮಕೈಗೊಳ್ಳಬೇಕು ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಆಸೋಸಿಯೇಷನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಧನ ಸಂಗ್ರಹದಲ್ಲಿ ಏಕರೂಪತೆ ಇಲ್ಲ. ಪ್ರತಿಯೊಂದು ಜಿಲ್ಲೆಗಳಲ್ಲೂ ನಿಗದಿ ಮಾಡಿರುವ ದರಗಳಲ್ಲಿ ವ್ಯತ್ಯಾಸವಿದೆ. ಏಕಾರೂಪವಾಗಿ ಒಂದೇ ಕಡೆ ರಾಜಧನ ಸಂಗ್ರಹಕ್ಕೆ ವ್ಯವಸ್ಥೆ ಮಾಡುವ ಜೊತೆಗೆ ಪ್ರಸ್ತುತ ನಿಗದಿ ಮಾಡಿರುವ ರಾಜಧನವನ್ನು ತಗ್ಗಿಸಬೇಕು ಎಂದು ಆಗ್ರಹಿಸಿದರು.

- Advertisement -

ಜಲ್ಲಿ ಕ್ರಷರ್ ಉದ್ಯಮಗಳಿಗೆ ಕಟ್ಟಡ ಕಲ್ಲಿನ ಅವಶ್ಯವಿದ್ದಲ್ಲಿ ತಕ್ಷಣವೇ ಪರವಾನಗಿ ನೀಡಬೇಕು. ಕಟ್ಟಡ ಕಲ್ಲಿನ ಪರವಾನಗಿಯನ್ನು 20 ರಿಂದ 50 ವರ್ಷಕ್ಕೆ ವಿಸ್ತರಿಸುವ ಜೊತೆಗೆ ಸರ್ಕಾರದ ನಿಯಮಾಗಳಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ತಪ್ಪಿಸಬೇಕು. ಪಟ್ಟಾ ಜಾಗದಲ್ಲಿ ಕಲ್ಲು ಗಣಿಗಾರಿಕೆಗೆ ವಿಶೇಷ ರಿಯಾಯಿತಿ ನೀಡಬೇಕು ಎಂದರು.

ಈ ಹಿಂದೆ ವಿಧಿಸಿರುವ 5ಪಟ್ಟು ದಂಡವನ್ನು ರದ್ದುಗೊಳಿಸುವ ಜೊತೆಗೆ ರಾಜಧನ ಸಂಗ್ರಹಕ್ಕೆ ಸಮರ್ಪಕ ನಿಯಮಗಳನ್ನು ರೂಪಿಸಬೇಕು. ಬೃಹತ್ ಕಾಮಗಾರಿಗಳ ಗಣಿಗುತ್ತಿಗೆ ನೀಡುವ ನಿಯಮಗಳು ಸಮರ್ಪಕವಾಗಿಲ್ಲ. ಜಲ್ಲಿಕಲ್ಲು ಘಟಕಗಳಿಗೆ ಪರಿಸರ ಪರವಾನಗಿ ಪಡೆಯುವಾಗ ಇರುವ ತೆರಿಗೆಗಳನ್ನು ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಸರ್ಕಾರಕ್ಕೆ ಸಮರ್ಪಕವಾಗಿ ರಾಜಧನ ಸಂದಾಯವಾಗಿದ್ದರೂ ಮತ್ತೆ ಮತ್ತೆ ದಂಡ ವಿಧಿಸಿರುವುದು ಸರಿಯಲ್ಲ. ಈ ಪ್ರಕ್ರಿಯೆಯನ್ನು ಕೈ ಬಿಡಬೇಕು. ಕಾನೂನುಬದ್ದವಾಗಿ ಗಣಿಗಾರಿಕೆ ನಡೆಸುವ ವ್ಯವಸ್ಥೆಗೆ ಪೂರಕವಾಗುವ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ಗಣಿಗಾರಿಕೆ ಉದ್ಯಮಕ್ಕೆ ಪೂರಕವಾದ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕಿರಣ್ ಜೈನ್ ಬಿ.ಆರ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಹಾಗೂ ಕಾರ್ಯದರ್ಶಿ ವೆಂಕಟೇಶ್ ರೆಡ್ಡಿ ಎನ್ ಉಪಸ್ಥಿತರಿದ್ದರು.