ಗಂಟುರೋಗದಿಂದ ಮೃತಪಟ್ಟ ಜಾನುವಾರುಗಳಿಗೆ 20 ಸಾವಿರ ರೂ ಪರಿಹಾರ: ಮುಖ್ಯಮಂತ್ರಿ ಘೋಷಣೆ

ಬೆಂಗಳೂರು: ಗಂಟುರೋಗದಿಂದ ಜಾನುವಾರುಗಳು ಮೃತಪಟ್ಟರೆ ಪಟ್ಟರೆ 20 ಸಾವಿರ ರೂ.ಗಳ ಪರಿಹಾರ ಒದಗಿಸಲಾಗುವುದು ಹಾಗೂ ಗಂಟು ರೋಗಕ್ಕೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಹಾವೇರಿ ಜಿಲ್ಲೆ ರಚನೆಗೊಂಡು 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ದನಕರುಗಳಿಗೆ ಗಂಟು ರೋಗ ಕಂಡುಬಂದಿದೆ. ರೋಗ ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಅದಕ್ಕೆ ಈಗಾಗಲೇ ಸೂಚನೆ ನೀಡಿ ವಿಶೇಷ ತಂಡ ಕಳಿಸಲಾಗುವುದು ಎಂದು ತಿಳಿಸಿದರು.

- Advertisement -

ವಿದ್ಯುಚ್ಛಕ್ತಿ ಸರಬರಾಜು ಐದು ಗಂಟೆಗಳ ಕಾಲವಿದ್ದು ಇದನ್ನು ಏಳು ಗಂಟೆಗಳಿಗೆ ವಿಸ್ತರಿಸಬೇಕು ಎಂಬ ರೈತರ ಬೇಡಿಕೆಯನ್ನು ಈಡೇರಿಸಲಾಗುವುದು. ಈ ಬಗ್ಗೆ ಕೂಡಲೇ ಆದೇಶ ಹೊರಡಿಸಲಾಗುವುದು. ವಿದ್ಯುತ್ ಸಂಸ್ಥೆಗಳ ಖಾಸಗೀಕರಣವನ್ನು ನಮ್ಮ ಸರ್ಕಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇವೆ. 11,137 ಪೌರ ಕಾರ್ಮಿಕರ ಸೇವೆಯನ್ನು ಕರ್ನಾಟಕ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಾಯಂಗೊಳಿಸಲಾಗಿದೆ. ಇನ್ನೆರಡು ಹಂತಗಳಲ್ಲಿ ಖಾಯಂ ಮಾಡುವ ಕೆಲಸವನ್ನು ಮಾಡಲಾಗುವುದು. ಅಂಗನವಾಡಿ, ಆಶಾ ಕಾರ್ಯಕರ್ತರಗೆ ಕೆಲಸಕ್ಕೆ ಸುರಕ್ಷತೆ, ಭದ್ರತೆ ನೀಡುವ ಕೆಲಸಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ದುಡಿಮೆಗೆ ಗೌರವ ಬರುವ ರೀತಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

ರೈತ ವಿದ್ಯಾನಿಧಿ ಯೋಜನೆಯಡಿ 14 ಲಕ್ಷ ಜನ ಈ ವರ್ಷ ಸೌಲಭ್ಯ ಪಡೆದಿದ್ದಾರೆ. ದುಡಿಯುವ ವರ್ಗಕ್ಕೆ ಮನ್ನಣೆ ನೀಡಲಿ ಆದತ್ಯೆ ನೀಡಲಾಗುತ್ತಿದೆ. ದುಡಿಮೆಯೇ ದೊಡ್ಡಪ್ಪ ಎಂಬುದು ನಮ್ಮ ಘೋಷವಾಕ್ಯ. ಹಾವೇರಿ ಜಿಲ್ಲೆ ನಮ್ಮ ಹೃದಯದಲ್ಲಿದೆ. ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಹಾವೇರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಭಿವೃದ್ಧಿ ಮಾಡಲು ಬದ್ಧನಾಗಿದ್ದೇನೆ ಎಂದರು.

ಈಗಿರುವ ಸಮಸ್ಯೆಗಳು ಹುಟ್ಟುಹಾಕಿರುವ ಸಮಸ್ಯೆಗಳಲ್ಲ. ಹತ್ತಾರು ವರ್ಷಗಳ ಸಮಸ್ಯೆಯಾಗಿದೆ. ಸಮಸ್ಯೆಯನ್ನು ಚರ್ಚೆ ಮಾಡದೆ ಅಧಿಕಾರವಿದ್ದಾಗ ಪರಿಹಾರದ ಭಾಗವಾಗಿ ನಾವು ಕೆಲಸ ಮಾಡಬೇಕು. ಸಮಸ್ಯೆಗಳನ್ನು ಹಾಗೆಯೇ ಬಿಟ್ಟರೆ ಅದು ಉತ್ತಮ ಆಡಳಿತಗಾರರ ಲಕ್ಷಣವಲ್ಲ. ನಾನು ದಿನಕ್ಕೆ 16-17 ತಾಸು ಕೆಲಸ ಮಾಡುತ್ತಿದ್ದು, ಜನಪರವಾಗಿರುವ ತೀರ್ಮಾನಗಳನ್ನು ಮಾಡುತ್ತಿದ್ದೇನೆ. ಬಹಳ ವರ್ಷಗಳಿಂದ ಆಗದೇ ಇರುವಂಥ ಹಲವಾರು ತೀರ್ಮಾನಗಳನ್ನು ಕೈಗೊಂಡಿದ್ದೇನೆ ಎಂದರು.

ಪ್ರವಾಹ, ಬರಗಾಲ, ಏನೇ ಬಂದರೂ ಕನ್ನಡ ನಾಡಿನ ಜನತೆಯ ಜೀವನವನ್ನು ಕಷ್ಟಕ್ಕೆ ಈಡು ಮಾಡದೇ ಅವರ ಕಷ್ಟಗಳಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ. ಪ್ರವಾಹ ಬಂದಾಗ ಜನ ತೊಂದರೆಗೀಡಾಗುತ್ತಾರೆ. ಬೆಳೆ ಪರಿಹಾರವನ್ನು ಕೇಂದ್ರ ಸರ್ಕಾರದ ಪರಿಹಾರದ ಜೊತೆಗೆ ರಾಜ್ಯ ಸರ್ಕಾರವೂ ಹೆಚ್ಚುವರಿಯಾಗಿ ಒದಗಿಸುವ ಮೂಲಕ ಎರಡು ಪಟ್ಟು ಪರಿಹಾರ ನೀಡಲಾಗಿದೆ. ನವಂಬರ್ ನಲ್ಲಿ ಪ್ರವಾಹವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 1400 ಕೋಟಿ ರೂ. ಗಳ ಪರಿಹಾರವನ್ನು ರೈತರಿಗೆ ನೀಡಲಾಗಿದೆ.. ಕೇಂದ್ರ ಸರ್ಕಾರಕ್ಕಿಂಥ ಹೆಚ್ಚಿನ ಪರಿಹಾರವನ್ನು ನೀಡಲಾಗುತ್ತಿದೆ. ಹಾವೇರಿಯಲ್ಲಿ ಮನೆಗಳಿಗೆ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.