ಉಪ್ಪಿನಂಗಡಿ ಪ್ರತಿಭಟನೆ, ಲಾಠಿಚಾರ್ಜ್ ಪ್ರಕರಣ: ಮೂರು ಎಫ್ಐಆರ್ ದಾಖಲು

Prasthutha|

ಮಂಗಳೂರು: ಉಪ್ಪಿನಂಗಡಿಯಲ್ಲಿ ನಡೆದ ಪ್ರತಿಭಟನೆ ಹಾಗೂ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಮೂರು ಪ್ರಕರಣಗಳನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗುವುದು. ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ. ಪುತ್ತೂರು ಉಪ ವಿಭಾಗದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಷ್ ಸೋನಾವಣೆ ತಿಳಿಸಿದ್ದಾರೆ.

- Advertisement -

ಉಪ್ಪಿನಂಗಡಿಗೆ ಇಂದು ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ ಅವರು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 6ರಂದು ಹಳೆಗೇಟ್ ನ ಸುಬ್ರಹ್ಮಣ್ಯ ಕ್ರಾಸ್ ಬಳಿ ಮೂವರ ಮೇಲೆ ತಲವಾರು ದಾಳಿ ನಡೆಸಿ, ಕೊಲೆಯತ್ನಕ್ಕೆ ಪ್ರಯತ್ನಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಈಗಾಗಲೇ ಓರ್ವನನ್ನು ಬಂಧಿಸಿ, ದಸ್ತಗಿರಿ ಮಾಡಿದ್ದಾರೆ.

ಆತನನ್ನು ವಿಚಾರಣೆ ನಡೆಸಿದಾಗ ಆತ ಈ ಕೃತ್ಯಕ್ಕೆ ಸಂಚು ನಡೆಸಿದವರ ಮಾಹಿತಿ ನೀಡಿದ್ದ. ಆತ ನೀಡಿದ ಮಾಹಿತಿಯಂತೆ ಪಿಎಫ್ ಐ ಸಂಘಟನೆಯ ಝಕಾರಿಯಾ ಕೊಡಿಪ್ಪಾಡಿ, ಮುಸ್ತಾಫ ಹಾಗೂ ಅಬ್ದುಲ್ ಹಮೀದ್ ಮೆಜೆಸ್ಟಿಕ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಆದರೆ ಅವರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಬೆಳಗ್ಗೆಯಿಂದಲೇ ಠಾಣೆಯ ಮುಂದೆ ಜಮಾಯಿಸಿ, ಪ್ರತಿಭಟನೆ, ರಸ್ತೆತಡೆ, ಘೋಷಣೆಗಳನ್ನು ಕೂಗುತ್ತಿದ್ದರು. ಮೂವರನ್ನು ವಿಚಾರಣೆಗಾಗಿ ಕರೆತಂದು ಕಾನೂನಾತ್ಮಕವಾಗಿ ವಿಚಾರಣಾ ಪ್ರಕ್ರಿಯೆಗಳು ನಡೆಯುತ್ತಿವೆ. ಆದ್ದರಿಂದ ನೀವೆಲ್ಲಾ ಸ್ಥಳದಿಂದ ತೆರಳಿ ಎಂದು ಪೊಲೀಸರು ಮನವಿ ಮಾಡಿದ್ದರೂ, ಗುಂಪಿನಲ್ಲಿದ್ದ ಜನರು ಚದುರದೇ, ಜನರ ಸಂಖ್ಯೆ ಹೆಚ್ಚಾಗುತ್ತಲೇ ಬರುತ್ತಿತ್ತಲ್ಲದೆ, ಇವರ ನಡೆ ಸಾರ್ವಜನಿಕ ಶಾಂತಿಭಂಗಕ್ಕೂ ಕಾರಣವಾಗಿತ್ತು ಎಂದರು.

- Advertisement -

ಮುಂಜಾಗೃತಾ ಕ್ರಮವಾಗಿ ಮೂರು ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ಬೇರೆ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

Join Whatsapp