ಹೊಸದಿಲ್ಲಿ: 1997ರಲ್ಲಿ 59 ಜನರ ಸಾವಿಗೆ ಕಾರಣವಾದ ದಿಲ್ಲಿಯ ಉಪಹಾರ್ ಚಿತ್ರಮಂದಿರದಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ತಿರುಚಿದ ಆರೋಪದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಸುಶೀಲ್ ಮತ್ತು ಗೋಪಾಲ್ ಅನ್ಸಾಲ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಇಂದು ತಿರಸ್ಕರಿಸಿದೆ.
ತಮ್ಮ ವೃದ್ಧಾಪ್ಯ ಸೇರಿದಂತೆ ಹಲವು ಕಾರಣಗಳಿಂದ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಅನ್ಸಾಲ್ ಸಹೋದರ ಹೈಕೋರ್ಟ್ ಮುಂದೆ ಮನವಿ ಮಾಡಿದ್ದರು.
ಜೂನ್ 13, 1997 ರಂದು ಜೆಪಿ ದತ್ತಾ ಅವರ ಚಲನಚಿತ್ರ ‘ಬಾರ್ಡರ್’ ಪ್ರದರ್ಶನದ ಸಂದರ್ಭದಲ್ಲಿ ಉಪಹಾರ್ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡು ಉಸಿರುಗಟ್ಟುವಿಕೆಯಿಂದ ಕನಿಷ್ಠ 59 ಜನರು ಸಾವನ್ನಪ್ಪಿದ್ದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ದುರಂತದಲ್ಲಿ ಸಾವನ್ನಪ್ಪಿದ ಯುವಕರ ಪೋಷಕರು ನ್ಯಾಯಾಲಯದಲ್ಲಿ ಅನ್ಸಲ್ ಸಹೋದರರ ವಿರುದ್ಧ ನಿರ್ಲಕ್ಷ್ಯದ ಆರೋಪದಿಂದ ನರಹತ್ಯೆಯವರೆಗೂ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು.
ವಿಚಾರಣಾ ನ್ಯಾಯಾಲಯವು ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 2.25-ಕೋಟಿ ದಂಡ ವಿಧಿಸಿದ ನಂತರ, ನವೆಂಬರ್ 2021 ರಿಂದ ಸಹೋದರರು ಜೈಲಿನಲ್ಲಿದ್ದಾರೆ.
ಪ್ರಕರಣದಲ್ಲಿ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಹಾಗೂ ಅವರ ಇಬ್ಬರು ಉದ್ಯೋಗಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.