ಲಕ್ನೋ: ಉತ್ತರಪ್ರದೇಶ ಕ್ರೀಡಾ ಸಚಿವ ಉಪೇಂದ್ರ ತಿವಾರಿ ಓಡೋಡಿ ಬಂದು ಚುನಾವಣೆಗೆ ನಾಮಪತ್ರ ಸಲ್ಲಿಸಿದ ಘಟನೆ ನಡೆದಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗಿದೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿಗಳಲ್ಲಿ ಒಬ್ಬರಾದ ಇವರು ಯಾತಕ್ಕಾಗಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಈ ಬಾರಿ ಬಿಜೆಪಿಯಿಂದ ಫೆಫ್ನಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ತಿವಾರಿ ಕೇಸರಿ ಶಾಲು, ಹಾರ ಹಾಕಿಕೊಂಡು ಓಡುವ ದೃಶ್ಯ ಭಾರೀ ಟ್ರೋಲ್ ಗೆ ಗುರಿಯಾಗಿದೆ.
ಫೆಫ್ನಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಫೆಬ್ರವರಿ 11 ಕೊನೆಯ ದಿನವಾಗಿದೆ. ಇದು ಸ್ಪಷ್ಟವಾಗಿ ಗೊತ್ತಿದ್ದರೂ ಸಚಿವರು ಯಾಕೆ ಹೀಗೆ ಓಡುತ್ತಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 403 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 10, 14, 20, 23, 27, ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.