ಲಕ್ನೋ: ಉತ್ತರ ಪ್ರದೇಶ ಚುನಾವಣಾ ರಂಗ ಕಾವೇರುತ್ತಿದ್ದು, ಆಡಳಿತರೂಢ ಬಿಜೆಪಿ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (SKM) ವತಿಯಿಂದ ಫೆಬ್ರವರಿ 3 ರಿಂದ ‘ಮಿಷನ್ ಉತ್ತರ ಪ್ರದೇಶ’ ಎಂಬ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಶುಕ್ರವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಬಂಧಿಸಬೇಕು ಎಂಬ ಬೇಡಿಕೆಯನ್ನು ತೀವ್ರಗೊಳಿಸುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.
ಎಸ್.ಕೆ.ಎಮ್ ವತಿಯಿಂದ ನಡೆಯುವ ಈ ಅಭಿಯಾನ ಭಾಗವಾಗಿ ಫೆಬ್ರವರಿ 3 ರಂದು ಪತ್ರಿಕಾಗೋಷ್ಠಿ ನಡೆಸಲಿದೆ. ಆ ಬಳಿಕ ರೈತ ಪರ ಸಂಘಟನೆಗಳು ‘ನುಕ್ಕಡ್ ಸಭೆ’ ಕೂಡ ನಡೆಸಲಿದೆ. ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಅಭಿಯಾನವನ್ನು ಹಮ್ಮಿಕೊಳ್ಳಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಕುರಿತು ಪ್ರತಿಕ್ರಿಯಿಸಿದ ರೈತ ಮುಖಂಡರು, ಬಿಜೆಪಿಯಿಂದ ಜನ ಬೇಸತ್ತಿದ್ದು, ಪಂಜಾಬ್ ಮತ್ತು ಉತ್ತರ ಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಧೂಳೀಪಟವಾಗಲಿದೆ ಎಂದು ತಿಳಿಸಿದ್ದಾರೆ. ಮಾತ್ರವಲ್ಲ ಕನಿಷ್ಠ ಬೆಂಬಲ ಬೆಲೆಯ ಸ್ಪಷ್ಟ ನಿಲುವು ಮತು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸುವ ನಮ್ಮ ಪ್ರಮುಖ ಬೇಡಿಕೆಯನ್ನು ಸರ್ಕಾರ ಇನ್ನೂ ಈಡೇರಿಸಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯ ಅಭಿಮನ್ಯುಅ ಸಿಂಗ್ ಕೊಹರ್ ತಿಳಿಸಿದ್ದಾರೆ.