ನವ ದೆಹಲಿ: ಪತ್ರಕರ್ತ ಸಿದ್ದಿಕ್ ಕಾಪ್ಪನ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿರೋಧಿಸಿ ಯು.ಪಿ. ಪೊಲೀಸರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ಅಫಿಡವಿತ್ ನಲ್ಲಿ ಪ್ರಸ್ತಾಪಿಸಿರುವ ಸಮಜಾಯಿಷಿಗಳು ಅಸಂಬದ್ದವಾಗಿವೆ ಮತ್ತು ಇದು ಸುಪ್ರೀಂ ಕೋರ್ಟ್ ನ ಹಾದಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್, ಉತ್ತರ ಪ್ರದೇಶ ಪೊಲೀಸರ ಆರೋಪಗಳನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿದ ಅವರು, ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ತಳೆದಿರುವ ನಿಲುವು ಅವರು ಏನೆಂಬುದನ್ನು ಬಹಿರಂಗಗೊಳಿಸಿದೆ. ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಕೃತ್ಯದ ಹಿನ್ನೆಲೆಯಲ್ಲಿ ಉಂಟಾದ ಜನಾಕ್ರೋಶವನ್ನು ತಣಿಸಲು ವಿಚಾರಣೆಯ ದಿಕ್ಕನ್ನೇ ಬದಲಿಸಲಾಯಿತು. ಉ.ಪ್ರ. ಎಸ್.ಟಿ.ಎಫ್. ಅಮಾಯಕ ವಿದ್ಯಾರ್ಥಿಗಳು ಮತ್ತು ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಹರಕೆಯ ಕುರಿಗಳಾಗಿ ಹೇಗೆ ಬಳಸಿಕೊಂಡಿತು ಮತ್ತು ಅಧಿಕಾರಿಗಳು ಅದನ್ನು ನಿಭಾಯಿಸಿದ ಭಯಾನಕ ರೀತಿಯು ಈಗ ಇಡೀ ಜಗತ್ತಿಗೆ ತಿಳಿದಿದೆ ಎಂದು ವಿವರಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಒಂದು ಕಾನೂನು ಬದ್ಧ ಮತ್ತು ಪ್ರಜಾಸತ್ತಾತ್ಮಕವಾಗಿ ಕಾರ್ಯ ನಿರ್ವಹಿಸುವ ಸಂಘಟನೆಯಾಗಿದೆ. ಅದರೊಂದಿಗೆ ಬೆರೆಯುವುದು ಅಪರಾಧವಲ್ಲ. ಅಮಾಯಕರ ನ್ಯಾಯವನ್ನು ತಡೆ ಹಿಡಿಯುವ ಪ್ರಯತ್ನದ ಭಾಗವಾಗಿ ಯು.ಪಿ. ಪೊಲೀಸರು ಪಾಪ್ಯುಲರ್ ಫ್ರಂಟ್ ಅನ್ನು ಭಯೋತ್ಪಾದನೆಯ ನಂಟು ಹೊಂದಿರುವ ಸಂಘಟನೆ ಎಂದು ಬಿಂಬಿಸುತ್ತಿದ್ದಾರೆ. ಪೊಲೀಸರು ದಾಖಲಿಸಿರುವ ಪ್ರಕರಣವು ಎಷ್ಟು ಆಧಾರರಹಿತವಾಗಿದೆ ಹಾಗೂ ಯುಪಿ ಪೊಲೀಸರು ಪುರಾವೆಗಳನ್ನು ಒದಗಿಸುವಲ್ಲಿ ಎಷ್ಟು ವಿಫಲಗೊಂಡು ಹತಾಶರಾಗಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತಿದೆ. ಈ ನಿರಪರಾಧಿಗಳು ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವುದು ಯುಪಿ ಪೊಲೀಸರು ಹೆಣೆದಿರುವ ಕಟ್ಟುಕಥೆಯಲ್ಲಿ ಸ್ವಲ್ಪವಾದರೂ ಸತ್ಯವಿರುವ ಸಂಶಯಕ್ಕಲ್ಲ; ಬದಲಾಗಿ ಅವರ ಮೇಲೆ ಹೇರಲಾಗಿರುವ ಕರಾಳ ಕಾಯ್ದೆಯಿಂದಾಗಿದೆ ಎಂದರು.
ಯುಪಿ ಪೊಲೀಸರ ಸುಳ್ಳನ್ನು ಸರ್ವೋಚ್ಛ ನ್ಯಾಯಾಲಯವು ವಿಫಲಗೊಳಿಸಲಿದೆ ಹಾಗೂ ಸಿದ್ದಿಕ್ ಕಾಪ್ಪನ್ ಮತ್ತು ಹತ್ರಾಸ್ ಪ್ರಕರಣದಲ್ಲಿ ಸಿಲುಕಿಸಲಾದ ಇತರ ಅಮಾಯಕರ ಅಕ್ರಮ ಜೈಲುಶಿಕ್ಷೆಯನ್ನು ಕೊನೆಗೊಳಿಸುತ್ತದೆ ಎಂದು ಪಾಪ್ಯುಲರ್ ಫ್ರಂಟ್ ನಿರೀಕ್ಷಿಸುತ್ತದೆ ಎಂದು ಅನೀಸ್ ಅಹ್ಮದ್ ಆಶಾವಾದ ವ್ಯಕ್ತಪಡಿಸಿದ್ದಾರೆ.