ಲಕ್ನೋ: ದರೋಡೆಕೋರರು ಎಂಬ ಶಂಕೆಯಲ್ಲಿ ಗುಂಪೊಂದು ಮುಸ್ಲಿಮ್ ವ್ಯಕ್ತಿ ಝಹೀರ್ ಖಾನ್ ಅವರನ್ನು ಹತ್ಯೆ ನಡೆಸಿದ್ದು, ಘಟನೆಯಲ್ಲಿ ಯೂಸುಫ್ ಖಾನ್ ಎಂಬಾತ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಪ್ರದೇಶದ ಪ್ರಯಾಗ್’ರಾಜ್ ಎಂಬಲ್ಲಿ ನಡೆದಿದೆ.
ಮೃತ ಝಹೀರ್ ಖಾನ್ ಹಾಗೂ ಗಾಯಾಳು ಯೂಸುಫ್ ಖಾನ್ ಇಬ್ಬರೂ ಪ್ರಯಾಗ್ ರಾಜ್ ನ ಕರೇಲಿ ನಿವಾಸಿಗಳಾಗಿದ್ದಾರೆ.
ಖುಲ್ದಾಬಾದ್ ನ ಮಾರ್ಕೆಟ್ ಲೇನ್ ನಲ್ಲಿ ನಡೆದ ಘಟನೆಯಲ್ಲಿ ಈ ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ದಾರಿಮಧ್ಯೆ ಹಲ್ಲೆಕೋರರ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮೀನಾ ತಿಳಿಸಿದ್ದಾರೆ.
ದುಷ್ಕರ್ಮಿಗಳಿಂದ ಅಮಾನುಷವಾಗಿ ಹಲ್ಲೆಗೊಳಗಾದ ಯೂಸುಫ್ ಖಾನ್ ಅವರ ಕಾಲು ಮತ್ತು ಕೈಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ಅವರ ಸ್ಥಿತಿ ಚಿಂತಾಜನಕವಾಗಿರುವ ಕುರಿತು ವೈದ್ಯರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ಝಹೀರ್ ಅವರ ಸಾವಿನ ಸುದ್ದಿ ಹರಡುತ್ತಲೇ ಆತನ ಪತ್ನಿ ಝಾಹೀರಾ ಅವರು ಖುಲ್ದಾಬಾದ್ ಠಾಣೆಗೆ ತೆರಳಿ ಅಪರಿಚಿತರ ವಿರುದ್ಧ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಝಹೀರ್ ಗಂಭೀರವಾದ ಗಾಯಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಲಾಗುತ್ತಿದೆ. ಸಂತ್ರಸ್ತ ಯುವಕರನ್ನು ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಮೃತ ಝಹೀರ್ ಮತ್ತು ಗಾಯಾಳು ಯೂಸುಫ್ ಅವರ ಸಂಬಂಧಿಕರು ಖುಲ್ದಾಬಾದ್ ಕ್ರಾಸಿಂಗ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇನ್ಸ್ ಪೆಕ್ಟರ್ ಸತ್ಯೇಂದ್ರ ತಿವಾರಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಅಲ್ಲದೆ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕ್ರಮ ಕೈಗೊಳ್ಳುವುದಾಗಿ ಸಂತ್ರಸ್ತ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.