ಇ.ಅಬೂಬಕ್ಕರ್ ಅವರಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಣೆ

Prasthutha|

ನವದೆಹಲಿ: ವೈದ್ಯಕೀಯ ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷ ಇ.ಅಬೂಬಕ್ಕರ್  ಅವರಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್  ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆದಿದ್ದಾರೆ.

- Advertisement -

ಅಬೂಬಕ್ಕರ್ ಅವರನ್ನು ಇತ್ತೀಚೆಗೆ ಎನ್ ಐಎ ಬಂಧಿಸಿತ್ತು.

70 ವರ್ಷ ಪ್ರಾಯದ ಇ.ಅಬೂಬಕ್ಕರ್ ಅವರು ಅಪರೂಪದ ಅನ್ನನಾಳದ ಕ್ಯಾನ್ಸರ್, ಪಾರ್ಕಿನ್ಸನ್ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ದೃಷ್ಟಿಹೀನತೆ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

- Advertisement -

 ಜಾಮೀನು ಅರ್ಜಿಗೆ ಎನ್ ಐಎ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂದಿರತ್ತ ಅವರು ಜಾಮೀನು ನೀಡಲು ನಿರಾಕರಿಸಿದರು.

 ಎನ್ ಐಎ ಪರವಾಗಿ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಕ್ಷಯ್ ಮಲಿಕ್, ಇಂತಹ ಜಾಮೀನು ಅರ್ಜಿಯನ್ನು ಮೊದಲು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಅಲ್ಲಿನ ಆದೇಶದ ವಿರುದ್ಧ ಎನ್ ಐಎ ಕಾಯ್ದೆಯ ಸೆಕ್ಷನ್ 21 ರ ಅಡಿಯಲ್ಲಿ ಮೇಲ್ಮನವಿ ಸಲ್ಲಿಸುವುದು ಪರಿಹಾರವಾಗಿದೆ ಎಂದು ವಾದಿಸಿದರು. ನಂತರ ಈ ಮೇಲ್ಮನವಿಯನ್ನು ಹೈಕೋರ್ಟ್ ನ ವಿಭಾಗೀಯ ಪೀಠ ವಿಚಾರಣೆ ನಡೆಸಬಹುದು ಎಂದು ಹೇಳಿದರು.

“ಅವರು ಮೊದಲು ವಿಶೇಷ ನ್ಯಾಯಾಧೀಶರನ್ನು ಸಂಪರ್ಕಿಸಲಿ. ಜಾಮೀನು ಕೋರಿ ಅವರು ವಿಶೇಷ ನ್ಯಾಯಾಧೀಶರನ್ನು ಸಹ ಸಂಪರ್ಕಿಸಿಲ್ಲ” ಎಂದು ಅಕ್ಷಯ್ ಹೇಳಿದರು.

ಅಬೂಬಕ್ಕರ್ ಪರ ವಕೀಲರು ವೈದ್ಯಕೀಯ ನೆಲೆಯಲ್ಲಿ ತುರ್ತು ಆದೇಶಗಳನ್ನು ಹೊರಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದಾಗ, ನ್ಯಾಯಮೂರ್ತಿ ಅನೂಪ್ ಕುಮಾರ್ ಮೌಖಿಕವಾಗಿ, ನನಗೆ ನ್ಯಾಯವ್ಯಾಪ್ತಿ ಮೀರಿ ಹೇಗೆ ಆದೇಶಗಳನ್ನು ಹೊರಡಿಸಲು ಸಾಧ್ಯ? ಎನ್ ಐಎ ಕಾಯ್ದೆ ಒಂದು ವಿಶೇಷ ಕಾಯ್ದೆಯಾಗಿದೆ. ನಮಗೆ ಅಧಿಕಾರವಿಲ್ಲ. ನೀವು ವಿಭಾಗೀಯ ಪೀಠವನ್ನು ಸಂಪರ್ಕಿಸಬೇಕು” ಎಂದು ಹೇಳಿದರು.

ನಂತರ ಅಬೂಬಕ್ಕರ್ ಪರ ವಕೀಲರು ತಮ್ಮ ಅರ್ಜಿಯನ್ನು ಹಿಂಪಡೆದುಕೊಳ್ಳುವುದಾಗಿ ಹೇಳಿದರು.

Join Whatsapp