ಮೈಸೂರು: ಹುಟ್ಟುತ್ತಾ ಒಕ್ಕಲಿಗ, ಬೆಳೆಯುತ್ತಾ ವಿಶ್ವ ಮಾನವ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಜಾತಿ ಪ್ರಮಾಣ ಪತ್ರ ಪ್ರದರ್ಶಿಸಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಮೈಸೂರಿನಲ್ಲಿ ಒಕ್ಕಲಿಗ ಜಾತಿ ಕಾರ್ಡ್ ವಿಚಾರ ತಾರಕಕ್ಕೇರಿದ್ದು, ಈ ಬಗ್ಗೆ ಅವರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಹುಟ್ಟುತ್ತಾ ಒಕ್ಕಲಿಗ, ಬೆಳೆಯುತ್ತಾ ವಿಶ್ವ ಮಾನವ. ಬಿಜೆಪಿ ಚೀಪ್ ಪಾಲಿಟಿಕ್ಸ್ ಕೈ ಬಿಡಬೇಕು. ನಾನು ಒಕ್ಕಲಿಗನಲ್ಲ ಅಂತಾ ಬಿಜೆಪಿಯವರು ಗೊಂದಲ ಮೂಡಿಸ್ತಿದ್ದಾರೆ. ನಾನು ಒಕ್ಕಲಿಗ ಅಂತಾ ಸುಳ್ಳು ಹೇಳುವ ಅಗತ್ಯವಿಲ್ಲ. ಪ್ರತಾಪಸಿಂಹ ಮೊದಲ ಬಾರಿ ಬಂದಾಗ ಗೌಡ ಅಂತಾ ಬದಲಿಸಿಕೊಂಡ್ರು. ಅದೇ ರೀತಿ ನಾನು ಲಕ್ಷ್ಮಣ್ ಗೌಡ ಅಂತಾ ಬದಲಾಯಿಸಿಕೊಳ್ಳಬೇಕಾ? ಹಣೆಯ ಮೇಲೆ ಒಕ್ಕಲಿಗ ಅಂತಾ ಬರೆದುಕೊಂಡು ಓಡಾಡಲು ಆಗುತ್ತಾ? ಸಂಸದ ಪ್ರತಾಪ್ ಸಿಂಹಗೆ ಒಕ್ಕಲಿಗರು 10 ವರ್ಷ ಅವಕಾಶ ಕೊಟ್ಟಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಎಂದು ಕೇಳುವುದು ತಪ್ಪಾ ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.