ಬೆಳಗಾವಿ: ಕಾಂಗ್ರೆಸ್ ಗೆ ಈಗ ಸೋಲಿನ ಭಯ ಆರಂಭವಾಗಿದ್ದು, ಚುನಾವಣೆ ನಂತರ ಸರ್ಕಾರ ಪತನವಾಗಲಿದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು ಎಂದು ಜನ ಬಯಸುತ್ತಿದ್ದಾರೆ. ಹಾಗಾಗಿ ಮೋದಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು, ಜನರ ಬಳಿ ಮತ ಕೇಳುತ್ತೇವೆ. ಮೋದಿ ಭಾರತವನ್ನು ವಿಶ್ವ ಗುರು ಆಗಿಸಿದ್ದಾರೆ. ಹಿಂದುಳಿದ ವರ್ಗದಿಂದ ಬಂದಿರುವ ಅವರು, ಎಲ್ಲ ವರ್ಗದವರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಹಿಂದುಳಿದ ವರ್ಗದ ನಾಯಕ ಎನ್ನುತ್ತಾರೆ. ಆದರೆ, ಮೋದಿ ಎಂದಿಗೂ ಹಿಂದುಳಿದ ವರ್ಗದ ನಾಯಕನೆಂದು ಹೇಳಿಕೊಂಡಿಲ್ಲ’ ಎಂದರು.
‘ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಕಾಂಗ್ರೆಸ್ಗೆ ಈಗ ಸೋಲಿನ ಭಯ ಆರಂಭವಾಗಿದ್ದು, ಚುನಾವಣೆ ನಂತರ ಸರ್ಕಾರ ಪತನವಾಗಲಿದೆ’ ಎಂದರು.
‘ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ ಅವರಂತಹ ಕಾಂಗ್ರೆಸ್ ನಾಯಕರು ಈಗ ಕೇಸರಿ ಶಾಲಿನ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಆದರೆ, ಅಲ್ಪಸಂಖ್ಯಾತ ಮತದಾರರ ಓಲೈಕೆಗಾಗಿ ಸಿದ್ದರಾಮಯ್ಯ ಅವರು ಕೇಸರಿ ಪೇಟ ಧರಿಸಲು ನಿರಾಕರಿಸಿದ್ದರು. ಸಿದ್ದರಾಮಯ್ಯನವರ ನಿಲುವನ್ನು ಇಬ್ಬರೂ ಸಚಿವರು ಖಂಡಿಸುತ್ತಾರೆಯೇ’ ಎಂದು ಪ್ರಶ್ನಿಸಿದರು.