‘ದುರದೃಷ್ಟವಶಾತ್ ನಾವು ಅವರನ್ನು 25 ವರ್ಷ ಪೋಷಿಸಿದೆವು: ಬಿಜೆಪಿ ವಿರುದ್ಧ ಉದ್ಧವ್ ವಾಗ್ದಾಳಿ

Prasthutha|

ಮುಂಬೈ: ಕಳೆದ ವರ್ಷ ನವೆಂಬರ್ ನಲ್ಲಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಜೆಪಿಯೊಂದಿಗೆ ಶಿವಸೇನೆ ತನ್ನ ರಾಜಕೀಯ ಮೈತ್ರಿಯಿಂದಾಗಿ 25 ವರ್ಷಗಳನ್ನು ವ್ಯರ್ಥ ಮಾಡಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಜನ್ಮದಿನದ ಸಂದರ್ಭದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಮೈತ್ರಿ ಪಾಲುದಾರರಾದ ಎನ್ಸಿಪಿ ಮತ್ತು ಕಾಂಗ್ರೆಸ್ ಸಹಯೋಗದೊಂದಿಗೆ ಸ್ಥಳೀಯ ಮಟ್ಟದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಂಸ್ಥೆಗಳನ್ನು ನಿರ್ಮಿಸುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.

ಹಿಂದುತ್ವದ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಠಾಕ್ರೆ, “ಬ್ರಿಟಿಷರಂತೆ ಗುಲಾಮಗಿರಿಯ ವಾತಾವರಣವನ್ನು ಸೃಷ್ಟಿಸುವುದು ಹಿಂದುತ್ವವಲ್ಲ. ನಿಜವಾದ ಹಿಂದೂಗಳು ಅದನ್ನು ಎಂದಿಗೂ ಒಪ್ಪುವುದಿಲ್ಲ. ಇವತ್ತು ನೀವು ಮೌನವಾದರೆ ಮತ್ತೆ ಗುಲಾಮಗಿರಿಗೆ ತಳ್ಳಲ್ಪಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ತುರ್ತುಪರಿಸ್ಥಿತಿಯ ವಿರುದ್ಧ ಇದ್ದವರು ದೇಶದಲ್ಲಿ ತುರ್ತುಪರಿಸ್ಥಿತಿಯ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಇಂದು ಅವರು ಪ್ರದರ್ಶಿಸುತ್ತಿರುವ ಪೊಳ್ಳು ಹಿಂದುತ್ವ ಅಧಿಕಾರದ ಹಂಬಲವೇ ಹೊರತು ಬೇರೇನೂ ಅಲ್ಲ. ನಾವು 25 ವರ್ಷಗಳ ಕಾಲ ಅವರನ್ನು ಪೋಷಿಸಿರುವುದು ದುರದೃಷ್ಟಕರ. ಇದನ್ನು ಮುರಿಯಲು ಶಿವಸೈನಿಕರು ಮುಂದಾಗಬೇಕು. ರಾಜ್ಯಾದ್ಯಂತ ಪಕ್ಷವನ್ನು ಹರಡಲು ಮತ್ತು ಪ್ರತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲು ಶಿವಸೇನಾ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸೂಚಿಸಿದರು.



Join Whatsapp