ಭಾರತದ ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದ ಕೋವಿಡ್

Prasthutha|

ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ ಬಹಳಷ್ಟು ಜನರು ಕೆಲಸವಿಲ್ಲದವರಾಗಿದ್ದಾರೆ. ಇಲ್ಲವೇ ಕೆಲಸ ಪಡೆಯಲು ಒದ್ದಾಡುವ ಸ್ಥಿತಿಯಲ್ಲಿ ಇದ್ದಾರೆ. ಸಿಎಂಐಇ- ಭಾರತೀಯ ಹಣಕಾಸು ಉಸ್ತುವಾರಿ ಕೇಂದ್ರದ ಮಾಹಿತಿಯಂತೆ ಜುಲೈ 25ರ ವಾರಾಂತ್ಯದಲ್ಲಿ ದೇಶದ ನಿರುದ್ಯೋಗ ಮಟ್ಟವು 7.14% ಅಧಿಕವಾಗಿದೆ. ಕಳೆದ ವಾರದ 5.98%ಕ್ಕಿಂತ ಇದು ಹೆಚ್ಚು. ಒಟ್ಟಾರೆ 5.1%ದಿಂದ ದೇಶದ ನಿರುದ್ಯೋಗವು 6.75ಕ್ಕೆ ಏರಿದೆ.

- Advertisement -


ದೇಶದ ಹಳ್ಳಿಗಾಡಿಗಿಂತ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ. ಕಳೆದ ವಾರಾಂತ್ಯದ 7.94%ಕ್ಕಿಂತ ಈ ವಾರಾಂತ್ಯ 8.11% ಏರುಗತಿ ಕಂಡಿದೆ. ಎರಡನೆಯ ಕೊರೋನಾ ಅಲೆ ಇದ್ದ ಕಳೆದ ಮೂರು ತಿಂಗಳುಗಳಿಗಿಂತ ಜುಲೈ ಸ್ವಲ್ಪ ವಾಸಿ. ದೇಶದ ನಗರ ಪ್ರದೇಶದ ನಿರುದ್ಯೋಗವು ಜುಲೈಯಲ್ಲಿ 9%ದಷ್ಟು ಇದೆ ಹಾಗೂ ರಾಷ್ಟ್ರೀಯ ನಿರುದ್ಯೋಗ ಮಟ್ಟ 8%ದಷ್ಟಿದೆ. ಜೂನ್ ತಿಂಗಳಿನಲ್ಲಿ ನಿರುದ್ಯೋಗ ಮಟ್ಟವು ರಾಷ್ಟ್ರೀಯ ಮಟ್ಟದಲ್ಲಿ 9.17%, ನಗರ ಪ್ರದೇಶಗಳಲ್ಲಿ 10.07% ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 8.75% ಇತ್ತು. ಮಳೆಗಾಲದೊಂದಿಗೆ ಆರ್ಥಿಕ ಚಟುವಟಿಕೆಯು ಜುಲೈಯಲ್ಲಿ ಪರಿಸ್ಥಿತಿಯನ್ನು ಸುಧಾರಿಸಿದ್ದರೂ 7ರಿಂದ 8% ಭಾರತೀಯ ಕಾರ್ಮಿಕ ವಲಯವನ್ನು ಬಾಧಿಸಿರುವುದು ಪರಿಸ್ಥಿತಿಯ ವ್ಯಾಪಕತೆ ತಿಳಿಸುತ್ತದೆ.

ಎರಡನೆಯ ಅಲೆಯ ಏಪ್ರಿಲ್, ಮೇ ತಿಂಗಳುಗಳಲ್ಲಿ 2.3 ಕೋಟಿ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ. ಜೂನ್‌ನಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿ 80 ಲಕ್ಷ ಜನರು ಕೆಲಸಕ್ಕೆ ಮರಳಿದ್ದಾರೆ. ಹರ್ಯಾಣದಲ್ಲಿ ನಿರುದ್ಯೋಗ ಸಮಸ್ಯೆ 27.95% ಎಂದರೆ ದೇಶದಲ್ಲೇ ಅತಿ ಹೆಚ್ಚು ಇದೆ. ತೆಲಂಗಾಣದಲ್ಲಿ ಅತಿ ಕಡಿಮೆ 4.8% ಇದ್ದರೆ ಪಕ್ಕದ ಆಂಧ್ರದಲ್ಲಿ 7.5% ಇದೆ.



Join Whatsapp