1976ರ ವಿಮಾನ ಅಪಘಾತದಲ್ಲಿ ಸತ್ತಿರುವರೆಂದು ಭಾವಿಸಿದ್ದ ವ್ಯಕ್ತಿ 45 ವರುಷಗಳ ಬಳಿಕ ಮರಳಿ ಕುಟುಂಬದ ಮಡಿಲಿಗೆ !

Prasthutha|

ಕೇರಳ : ಅಬುದಾಬಿಯಿಂದ ಮದ್ರಾಸಿಗೆ ಬರುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವು 1976ರ ಅಕ್ಟೋಬರ್ 12ರಂದು ಅಪಘಾತಕ್ಕೀಡಾಗಿ 95 ಜನ ಸಾವಿಗೀಡಾಗಿದ್ದರು. ಅದರಲ್ಲಿ ಪ್ರಯಾಣಿಸಿದ್ದ ಕೇರಳದ ಸಜ್ಜದ್ ತಂಗಳ್ ಅವರ ಕುಟುಂಬದವರು ಬದುಕುಳಿದವರ ಪಟ್ಟಿಯಲ್ಲಿ ಸಜ್ಜಾದ್ ಅವರ ಹೆಸರು ಇಲ್ಲದ್ದರಿಂದ ಅವರು ಕೂಡಾ ನಿಧನರಾಗಿರುವರೆಂದು ಭಾವಿಸಿದರು. ಆದರೆ 45 ವರುಷಗಳ ಬಳಿಕ ಮುಂಬೈ ಸಾಮಾಜಿಕ ಕಾರ್ಯಕರ್ತರೊಬ್ಬರ ಪ್ರಯತ್ನದಿಂದ ಸಜ್ಜದ್ ತಂಗಳ್ ತಮ್ಮ ಕುಟುಂಬದವರನ್ನು ಸೇರಿದ್ದಾರೆ.

- Advertisement -


ಕೇರಳದ ಕೊಲ್ಲಂ ಜಿಲ್ಲೆಯ ಸಜ್ಜಾದ್ ತಂಗಳ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸಿನಿಮಾ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಅವರು ಮಲಯಾಳಿ ನಟರನ್ನು ಕರೆಸಿ ಸ್ಟಾರ್ ಶೋ ಏರ್ಪಡಿಸುತ್ತಿದ್ದರು. ಅಂಥಹಾ ಒಂದು ಕಾರ್ಯಕ್ರಮ ಅವರ ಸಾವಿನ ಸುದ್ದಿಗೆ ಕಾರಣವಾಯಿತು. 1976ರ ಅಕ್ಟೋಬರ್‌ನಲ್ಲಿ ರಾಣಿ ಚಂದ್ರ ತಂಡದ ಕಾರ್ಯಕ್ರಮ ಯುಎಇಯಲ್ಲಿ ನಡೆದಿತ್ತು. ಅವರು ಅಬುದಾಬಿಯಿಂದ ಮದರಾಸಿಗೆ ಮುಂಬಯಿ ಹಾದಿಯಾಗಿ ಮರಳುವಾಗ ವಿಮಾನಾಪಘಾತದಿಂದ 95 ಜನ ಸಾವನ್ನಪ್ಪಿದ್ದರು. ಆದರೆ ತಂಗಳ್ ಮುಂಬಯಿಯಲ್ಲೇ ಇಳಿದಿದ್ದರಿಂದಾಗಿ ಸ್ವಲ್ಪದರಲ್ಲೇ ಪ್ರಾಣವುಳಿಸಿಕೊಂಡಿದ್ದರು. ಅಲ್ಲಿಂದ ಹೊರಟಿದ್ದ ವಿಮಾನವು ಅಪಘಾತಕ್ಕೀಡಾಗಿತ್ತು. ಆದರೆ ಆ ಬಳಿಕ ಅವರು ಮನೋಘಾತಕ್ಕೆ ಒಳಗಾಗಿದ್ದರು. ಸೋಶಿಯಲ್ ಆಂಡ್ ಇವಾಂಜಲಿಕಲ್ ಎಸೋಸಿಯೇಶನ್ ಫಾರ್ ಲವ್ ಆಶ್ರಮದ ಫಾದರ್ ಕೆ. ಎಂ. ಫಿಲಿಪ್ ಅವರು ತಂಗಳ್‌ರಿಗೆ ಆಶ್ರಯ ನೀಡಿದ್ದರು.
ವಿಮಾನದಲ್ಲಿದ್ದ ಗೆಳೆಯ ಸುಧಾಕರನ್ ಸಾವು ಮೊದಲಾದ ಘಟನೆಯಿಂದ ತಂಗಳ್ ನೊಂದಿದ್ದರು.

ಹೊಟ್ಟೆಪಾಡಿಗಾಗಿ ಪಾಸ್‌ಪೋರ್ಟ್ ತುಂಬುವುದು, ಕ್ಯಾಟರಿಂಗ್ ಸಹಾಯಕ ಮೊದಲಾದ ಕೆಲಸಗಳನ್ನು ಮಾಡಿಕೊಂಡಿದ್ದರು. ಅಂತಿಮವಾಗಿ ತೀರಾ ವಯೋಸಹಜ ಕಾಯಿಲೆಯಲ್ಲಿ ಅವರು ಫಿಲಿಪ್‌ರ ಆಶ್ರಮಕ್ಕೆ 2019ರಲ್ಲಿ ಸೇರಿದರು. ಆಶ್ರಮದ ಸಾಮಾಜಿಕ ಕಾರ್ಯಕರ್ತರೊಬ್ಬರು ಇತ್ತೀಚೆಗೆ ಕೇರಳಕ್ಕೆ ಭೇಟಿ ಕೊಟ್ಟಾಗ ತಂಗಳ್‌ರ ಸಂಬಂಧಿಕರನ್ನು ಕಂಡುಹಿಡಿದರು. 91 ವರುಷದ ಸಜ್ಜದ್ ತಂಗಳ್‌ರ ತಾಯಿ ಫಾತಿಮಾ ಬೀವಿ ಮಗನ ಬರುವಿಕೆಗಾಗಿ ಕಾದಿದ್ದರು. ತಂದೆ ಯೂನಿಸ್ ಕುಂಜು 2012ರಲ್ಲಿ ಮರಣ ಹೊಂದಿದ್ದರು.
ಸಜ್ಜಾದ್‌ರಿಗೆ ಮೂವರು ಸಹೋದರರು, ನಾಲ್ಕು ಜನ ಸಹೋದರಿಯರು. ಇವರೆಲ್ಲರೂ ವಿಮಾನಾಪಘಾತದ ವೇಳೆ ಸಂಬಂಧಪಟ್ಟವರಲ್ಲಿ ಸಜ್ಜಾದ್ ಅವರ ಕುರಿತು ಎಲ್ಲಾ ಕಡೆ ವಿಚಾರಿಸಿ ಕೈ ಚೆಲ್ಲಿದ್ದರು. ಬದುಕಿರಲಿ, ಕರೆ ಮಾಡಲಿ ಎಂದು ಆಶಿಸಿದ್ದರು. ಅದು ಹೀಗೆ ನಿಜ ಆಗಿದೆ.

Join Whatsapp