ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ, ಇಂಥ ಸ್ಥಿತಿ ಸ್ವಾತಂತ್ರ್ಯ ಬಂದಮೇಲೆ ಯಾವತ್ತೂ ಬಂದಿರಲಿಲ್ಲ: ಸಿದ್ದರಾಮಯ್ಯ

Prasthutha|

ಶಿವಮೊಗ್ಗ: ಕಳೆದ ಎರಡೂಕಾಲು ವರ್ಷಗಳಲ್ಲಿ ರಾಜ್ಯ ಸರ್ಕಾರದ ಮತ್ತು ಏಳು ವರ್ಷಗಳ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳು ಜನರನ್ನು ಭ್ರಮನಿರಸನಗೊಳಿಸಿದೆ. 2014 ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಇದರಿಂದ ಜನ ನೊಂದಿದ್ದಾರೆ. ಜೊತೆಗೆ ಬೆಲೆಯೇರಿಕೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -


ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭೆ ಕ್ಷೇತ್ರದ ಕುಬಟೂರಿನಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ಕೇಂದ್ರ ಸರ್ಕಾರ ಎರಡು ಕಾರಣ ನೀಡುತ್ತಿದೆ. ಒಂದು ಹಿಂದಿನ ಯು.ಪಿ.ಎ ಸರ್ಕಾರ ಕಚ್ಚಾತೈಲದ ಮೇಲೆ ಸಾಲ ಮಾಡಿತ್ತು. ಎರಡನೆಯದು ಬೆಲೆಯೇರಿಕೆ ಇಂದ ಬಂದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡುತ್ತಿದ್ದೇವೆ. ಇದನ್ನು ಮನ್ ಕೀ ಬಾತ್ ನಲ್ಲಿ ಮೋದಿಯವರು ಹೇಳಿದ್ದಾರೆ. ತೈಲಬಾಂಡ್ ಖರೀದಿ ಆರಂಭ ಮಾಡಿದ್ದು ವಾಜಪೇಯಿ ಸರ್ಕಾರ, 1 ಲಕ್ಷದ 40 ಸಾವಿರ ತೈಲಬಾಂಡ್ ಖರೀದಿ ಮಾಡಲಾಗಿದೆ. ಈವರೆಗೆ ತೀರಿಸಿರುವ ಸಾಲ 3500 ಕೋಟಿ. ವಾರ್ಷಿಕ 10,000 ಕೋಟಿ ಬಡ್ಡಿ ಕಟ್ಟಲಾಗಿದೆ. 2014 ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9 ರೂಪಾಯಿ 21 ಪೈಸೆ ಡೀಸೆಲ್ 3 ರೂಪಾಯಿ 45 ಪೈಸೆ ಇತ್ತು, ಈಗ ಡೀಸೆಲ್ ಮೇಲೆ 31 ರೂಪಾಯಿ 84 ಪೈಸೆ, ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆ ಗೆ ಹೆಚ್ಚಾಗಿದೆ ಎಂದು ವಿವರಿಸಿದರು.


ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಬೆಲೆ 47 ರೂಪಾಯಿ ಇತ್ತು, ಇಂದು 100 ರೂಪಾಯಿ ಆಗಿದೆ. ಪೆಟ್ರೋಲ್ ಬೆಲೆ 70 ಇತ್ತು ಇಂದು 112 ರೂಪಾಯಿ ಆಗಿದೆ. ಏಳು ವರ್ಷಗಳಲ್ಲಿ ಡೀಸೆಲ್ ಪೆಟ್ರೋಲ್ ಮೇಲೆ ಸಂಗ್ರಹವಾಗಿರುವ ತೆರಿಗೆ 23 ಲಕ್ಷ ಕೋಟಿ. ಒಟ್ಟು ಸಾಲ ಇರುವುದೇ 1 ಲಕ್ಷದ 40 ಸಾವಿರ ಕೋಟಿ. ನರೇಂದ್ರ ಮೋದಿ ಅವರೇ ಜನರಿಗೇಕೆ ಸುಳ್ಳು ಹೇಳ್ತೀರ? ಸತ್ಯ ಹೇಳಿ ಎಂದು ಕುಟುಕಿದರು.

- Advertisement -


ಯು.ಪಿ.ಎ ಅವಧಿಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ವೊಂದಕ್ಕೆ 120- 125 ಡಾಲರ್ ಇತ್ತು. ಈಗ 70-80 ಡಾಲರ್ ಇದೆ. ಇದು 2013 ರಿಂದ 16 ರ ವರೆಗೆ 45, 46, 49 ಡಾಲರ್ ಆಗಿತ್ತು. ಆಗ ಪೆಟ್ರೋಲ್ ಬೆಲೆ ಇಳಿಕೆ ಮಾಡಿದ್ರಾ? ಇದಕ್ಕೆ ಮೋದಿಯವರ ಬಳಿ ಉತ್ತರವಿದೆಯೇ? ಎಂದು ಪ್ರಶ್ನಿಸಿದರು.
2013 ರಲ್ಲಿ ಒಂದು ಸಿಲಿಂಡರ್ ಬೆಲೆ 414 ರೂಪಾಯಿ ಇತ್ತು. ಇವತ್ತು 980 ರೂಪಾಯಿ ಆಗಿದೆ. ಮೋದಿ ಹೇಳಿದ ಅಚ್ಚೇ ದಿನ್ ಎಲ್ಲಿದೆ? ಡೀಸೆಲ್ ಬೆಲೆ ಹೆಚ್ಚಾದರೆ ಸಾಗಾಣಿಕೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತೆ. ಡೀಸೆಲ್ ಪೆಟ್ರೋಲ್ ಬೆಲೆ ಹೆಚ್ಚಾದರೆ ರೈತರಿಗೇನು ಸಮಸ್ಯೆ ಆಗಲ್ಲ ಎಂದು ಕೇಂದ್ರ ಸಚಿವರೊಬ್ಬರು ದಡ್ಡನಂತೆ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂಕಾಲು ವರ್ಷ ಆಗಿದೆ. ಈ ಅವಧಿಯಲ್ಲಿ ಸೂರಿಲ್ಲದ ಬಡವರಿಗೆ ಒಂದೇ ಒಂದು ಮನೆಯನ್ನು ಕಟ್ಟಿಸಿಕೊಟ್ಟಿಲ್ಲ. ಅದಕ್ಕಾಗಿಯೇ ನಿನ್ನೆ ನಾನು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಬಸವರಾಜ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದೆ. ಇದಕ್ಕೆ ಉತ್ತರವಿಲ್ಲ. ಅಭಿವೃದ್ಧಿ ಮೇಲೆ ಓಟು ಕೇಳೋರು ಅಭಿವೃದ್ಧಿ ಕೆಲಸ ಮಾಡಿದ್ದಾರ ಹೇಳಲಿ ಎಂದು ಸವಾಲು ಹಾಕಿದರು.
ಮೊದಲು ಮೀಸಲಾತಿ ವಿರೋಧ ಮಾಡುತ್ತಿದ್ದವರೇ ಇಂದು ನಮಗೂ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದಾರೆ.

ಮೀಸಲಾತಿಯಿಂದ ಪ್ರತಿಭೆಗಳಿಗೆ ಅನ್ಯಾಯ ಆಗುತ್ತೆ ಎನ್ನುತ್ತಿದ್ದವರು ಇವರೇ ಅಲ್ಲವೇ? ನರೇಂದ್ರ ಮೋದಿ ಅವರು ಸಂವಿಧಾನ ತಿದ್ದುಪಡಿ ಮಾಡಿ ಮೇಲ್ವರ್ಗದ ಜನರಿಗೂ ಮೀಸಲಾತಿ ನೀಡಿದ್ದಾರೆ. ಈಗ ಮೀಸಲಾತಿ ಬಗ್ಗೆ ವಿರೋಧ ಮಾಡುವ ಹಾಗಿಲ್ವ?
ಯಾವುದೇ ಸಮುದಾಯ ಮೀಸಲಾತಿ ಕೇಳೋದು ತಪ್ಪಲ್ಲ. ಅರ್ಹರಿಗೆ ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧವಿಲ್ಲ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಏನು ಹೇಳಿದೆ ಗೊತ್ತಾ, ಪ್ರತೀ ರಾಜ್ಯದಲ್ಲಿ ಒಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇರಬೇಕು, ಆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಲು ಬಯಸುವವರು ಆಯೋಗಕ್ಕೆ ಮನವಿ ನೀಡಬೇಕು. ಮನವಿ ಪರಿಶೀಲನೆ ನಡೆಸಿ, ಆ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದು ಬಿಡುವುದು ಆಯೋಗದ ಕೆಲಸ ಎಂದು ವಿವರಿಸಿದರು.


ಕೊರೊನಾ ಕಾಲದಲ್ಲೂ ನಮ್ಮ ಇತಿಮಿತಿಯೊಳಗೆ ಬೆಲೆಯೇರಿಕೆ ವಿರುದ್ಧ ಹೋರಾಟ ಮಾಡಿದ್ದೇವೆ. ಪ್ರತಿಭಟನೆ ಮಾಡಲು ಹೊರಟರೆ ಬಂಧಿಸುತ್ತಾರೆ, ನಮಗೆ ಮಾತನಾಡಲು ಅವಕಾಶವನ್ನೇ ಕೊಡುವುದಿಲ್ಲ. ಮೋದಿ ಸರ್ಕಾರ ವಿರುದ್ಧ ಮಾತನಾಡಿದರೆ ಭಯೋತ್ಪಾದಕ, ದೇಶದ್ರೋಹಿ ಎನ್ನುತ್ತಾರೆ, ಇ.ಡಿ ಅಥವಾ ಐ.ಟಿ ಯವರನ್ನು ಛೂ ಬಿಡುತ್ತಾರೆ. ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕು? ಇಂದಿರಾಗಾಂಧಿ ಯವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೂಡ ಹೀಗೆ ಮಾಡಿರಲಿಲ್ಲ. ಕೊರೊನಾ ಬಂದಿರುವುದು ಕೇಂದ್ರ ಸರ್ಕಾರಕ್ಕೆ ವರದಾನವಾಗಿದೆ. ಮಾಧ್ಯಮಗಳು ಸರ್ಕಾರದ ವಿರುದ್ಧ ಮಾತನಾಡಿದರೆ ನೋಟಿಸ್ ಬರುತ್ತದೆ. ಪರೀಕ್ಷೆ ಮಾಡಿ ಬೇಕಿದ್ದರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂಥ ಸ್ಥಿತಿ ಸ್ವಾತಂತ್ರ್ಯ ಬಂದಮೇಲೆ ಯಾವತ್ತೂ ಬಂದಿರಲಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.



Join Whatsapp