ಮಾಧ್ಯಮಗಳಲ್ಲಿ ಅಶ್ಲೀಲ ಮಾಹಿತಿ ಪ್ರಸಾರಕ್ಕೆ ನಿರ್ಬಂಧ: ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್

Prasthutha: October 23, 2021
ಕೃಪೆ: ಬಾರ್ & ಬೆಂಚ್

ಬೆಂಗಳೂರು : ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದಲ್ಲಿ ಸುದ್ದಿ ಅಥವಾ ಕಾರ್ಯಕ್ರಮದ ಭಾಗವಾಗಿ ಅಸಭ್ಯ ಅಥವಾ ಅಶ್ಲೀಲ ಮಾಹಿತಿ ಪ್ರಸಾರ ಮಾಡುವುದಕ್ಕೆ ನಿರ್ಬಂಧ ವಿಧಿಸುವ ಸಂಬಂಧ ಶಾಸನಬದ್ಧ ನಿಯಮಗಳನ್ನು ರೂಪಿಸುವ ಕುರಿತು ನಿರ್ದೇಶನ ನೀಡುವುದಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಮನವಿಯ ತೀರ್ಪನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್ ಕಾಯ್ದಿರಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ಭವಿಷ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಎಚ್ಚರಿಕೆ ನೀಡಿ ಪ್ರಕರಣ ವಿಲೇವಾರಿ ಮಾಡಲಾಗುವುದು ಎಂದಿದೆ.


ಅರ್ಜಿದಾರರ ಪರ ವಕೀಲೆ ದೀಪಾಶ್ರೀ ಅವರು “ನ್ಯಾಯಾಲಯದ ಮುಂದಿರುವ ಪ್ರಕರಣದ ಮಾಹಿತಿಯನ್ನು ವಿಭಿನ್ನ ರೂಪದಲ್ಲಿ ಸುದ್ದಿಯಾಗಿ ಪ್ರಕಟಿಸಬಾರದು ಮತ್ತು ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಬಾರದು. ತನಿಖೆ ಪೂರ್ಣಗೊಳ್ಳುವವರೆಗೆ ಅದಕ್ಕೆ ಸಂಬಂಧಿಸಿದ ಮಾಹಿತಿ, ಆರೋಪಿಗಳು ಅಥವಾ ಸಂತ್ರಸ್ತರ ವಿಚಾರವನ್ನು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ನೋಡಿಕೊಳ್ಳಬೇಕು. ಇದನ್ನು ಉಲ್ಲಂಘಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಜೂನ್ 15ರಂದು ಪೀಠ ಆದೇಶ ಮಾಡಿತ್ತು. ಈ ಸಂಬಂಧ ಆಗಸ್ಟ್ 11ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದರಲ್ಲಿ ಎರಡನೇ ಭಾಗದಲ್ಲಿರುವ ನಿಯಮ ಉಲ್ಲಂಘಿಸಿದ ಪೊಲೀಸರ ವಿರುದ್ಧ ಸೂಕ್ತ ಪ್ರಕ್ರಿಯೆ ಆರಂಭಿಸುವ ಕುರಿತಾದ ಆದೇಶವನ್ನು ಪಾಲಿಸಲಾಗಿಲ್ಲ. ಈ ಸಂಬಂಧ ಸೂಕ್ತ ನಿರ್ದೇಶನವನ್ನು ನೀಡಬೇಕು” ಎಂದು ಮನವಿ ಮಾಡಿದರು.


ಇದಕ್ಕೆ ಪೀಠವು “ಪೊಲೀಸರ ವಿರುದ್ಧ ಕೈಗೊಂಡಿರುವ ಕ್ರಮದ ವಿಚಾರವನ್ನು ಮುಂದುವರಿಸಲು ನೀವು ಇಚ್ಛಿಸಿದ್ದೀರಾ? ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಬಗ್ಗೆ ನಿಮಗೆ ಸಹಮತ ಇಲ್ಲವೇ? ಎಂದು ಪ್ರಶ್ನಿಸಿತು.ಆಗ ದೀಪಾಶ್ರೀ ಅವರು “ರಾಜ್ಯ ಸರ್ಕಾರ ಹಿಂದೆಯೂ ಇಂಥ ಸುತ್ತೋಲೆಗಳನ್ನು ಹೊರಡಿಸಿದೆ. ಜನರಿಗೆ ಸುದ್ದಿ ಪ್ರಸ್ತುತಪಡಿಸುವಾಗ ಅಶ್ಲೀಲ ವಿಚಾರಗಳನ್ನು ಸುದ್ದಿಯ ರೂಪದಲ್ಲಿ ಪ್ರಸ್ತುತಪಡಿಸುತ್ತಿರುವುದಕ್ಕೆ ತಮ್ಮ ತಕರಾರು ಇದೆ. ಇದಕ್ಕೆ ಅಧಿಕಾರಿಗಳು ಜವಾಬ್ದಾರರಾಗಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮವಾಗಬೇಕು” ಎಂದರು.ಆಗ ನ್ಯಾಯಾಲಯವು “ಭವಿಷ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಪೊಲೀಸರಿಗೆ ನಿರ್ದೇಶಿಸಿ ಪ್ರಕರಣವನ್ನು ವಿಲೇವಾರಿ ಮಾಡಲಾಗುವುದು” ಎಂದು ಹೇಳಿತು. ಇದಕ್ಕೆ ಅರ್ಜಿದಾರರ ಪರ ವಕೀಲರು ಸಹಮತ ವ್ಯಕ್ತಪಡಿಸಿದರು.


ಅಶ್ಲೀಲ ಮಾಹಿತಿಯನ್ನು ಸುದ್ದಿಯ ರೂಪದಲ್ಲಿ ಪ್ರಸಾರ ಅಥವಾ ಪ್ರಕಟ ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕು. ಈ ಸಂಬಂಧ ಶಾಸನಬದ್ಧ ನಿಯಮಗಳನ್ನು ರೂಪಿಸಬೇಕು. ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿರುವ ವಿಚಾರಗಳನ್ನು ವಿಶ್ಲೇಷಣೆಗೆ ಒಳಪಡಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!