ಚೊಚ್ಚಲ ಪಂದ್ಯದಲ್ಲೇ ಐಪಿಎಲ್’ ನಲ್ಲಿ ವೇಗದ ದಾಖಲೆ ಬರೆದ ಉಮ್ರಾನ್ ಮಲಿಕ್

Prasthutha|

ದುಬೈ: ಯುಎಇನಲ್ಲಿ ನಡೆಯುತ್ತಿರುವ 14ನೇ ಸೀಸನ್ ಐಪಿಎಲ್’ ಯುವ ಕ್ರಿಕೆಟಿಗರ ಅತ್ಯುತ್ತಮ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಭಾನುವಾರ ನಡೆದ ಕೆಕೆಆರ್ ಹಾಗೂ ಸನ್ ರೈಸರ್ಸ್ ನಡುವಿನ ಪಂದ್ಯದಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ಸನ್ ರೈಸರ್ಸ್ ತಂಡದ ಯುವ ಬೌಲರ್ ವೇಗದ ಬೌಲಿಂಗ್’ನಲ್ಲಿ ದಾಖಲೆ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

- Advertisement -


ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ 21 ವರ್ಷ ಹರೆಯದ ಉಮ್ರಾನ್ ಮಲಿಕ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 151.03 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಪ್ರಸಕ್ತ ಐಪಿಎಲ್’ನಲ್ಲಿ ಅತೀ ವೇಗದ ಭಾರತೀಯ ಬೌಲರ್ ಎಂಬ ಕೀರ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ತಾನು ಎಸೆದ ಮೊದಲ ಓವರ್’ನಲ್ಲಿ 146 ಕಿಲೋಮೀಟರ್ ವೇಗದ ಎಸೆತ ಎಸೆದಿದ್ದ ಉಮ್ರಾನ್ ಮಲಿಕ್, ನಂತರದ ಓವರ್’ಗಳಲ್ಲಿ ಎರಡು ಬಾರಿ ಗಂಟೆಗೆ 150 ಕಿಲೋಮೀಟರ್’ಗೂ ಹೆಚ್ಚಿನ ವೇಗದ ಎಸೆತಗಳನ್ನು ಎಸೆದರು. ಆಮೂಲಕ ಪ್ರಸ್ತಕ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಟಾಪ್ ಟೆನ್ ಫಾಸ್ಟ್ ಬೌಲರ್ಸ್’ಗಳ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದರು. ಆ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಬಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ನಿಧಾನಗತಿಯಿಂದ ಯುಎಇಯ ಪಿಚ್’ಗಳಲ್ಲಿ 150ಪ್ಲಸ್ ಕಿಲೋಮೀಟರ್ ವೇಗದಲ್ಲಿ ಉಮ್ರಾನ್ ಬೌಲಿಂಗ್ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.


ಸನ್’ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ವೇಗಿ ತಂಗರಸು ನಟರಾಜನ್ ಕೊರೊನಾ ಸೋಕಿಗೆ ಒಳಗಾದ ಕಾರಣ ತಂಡದ ನೆಟ್ ಬೌಲರ್ ಆಗಿದ್ದ ಉಮ್ರಾನ್ ಮಲಿಕ್ ಅನಿರೀಕ್ಷಿತವಾಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರು.
ಕೆಕೆಆರ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್’ಗಳನ್ನು ಎಸೆದಿದ್ದ ಉಮ್ರಾನ್ ಮಲಿಕ್, 27 ರನ್ ನೀಡಿದ್ದರು. ಯಾವುದೇ ವಿಕೆಟ್ ಪಡೆಯುವಲ್ಲಿ ವಿಫಲರಾದರೂ ಸಹ ಮಲಿಕ್ ಬೌಲಿಂಗ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಐಪಿಎಲ್’ನ ಅತೀ ವೇಗದ ಎಸೆತಗಳ ಟಾಪ್ ಟೆನ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ದಕ್ಷಿಣ ಅಫ್ರಿಕಾದ ಬೌಲರ್ ಆನ್ರಿಚ್ ನೊರ್ಜೆ ಹೆಸರಿದೆ. ನೊರ್ಜೆ ಐಪಿಎಲ್’ನಲ್ಲಿ ಗಂಟೆಗೆ 155.21, 154.74 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ ದಾಖಲೆ ಹೊಂದಿದ್ದಾರೆ.

- Advertisement -

Join Whatsapp